ನಗರದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವಾಗಿರುವ ಬಸವನಗುಡಿಯ ಕಡಲೆಕಾಯಿ ಪರಿಷೆ 2025ರ ದಿನಾಂಕ ಇದೀಗ ಘೋಷಣೆ ಮಾಡಲಾಗಿದೆ. ರಾಜ್ಯದ ವಿವಿಧೆಡೆಯಿಂದ ಜನರು ಈ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಾರೆ. ಕಾರ್ತಿಕ ಮಾಸದ ಕೊನೆಯ ಸೋಮವಾರ ಈ ಮೂರು ದಿನಗಳ ಕಡಲೇಕಾಯಿ ಜಾತ್ರೆ ನಡೆಯುತ್ತದೆ. ಈ ವೇಳೆ ಬೆಂಗಳೂರು ಸೇರಿ ರಾಜ್ಯದ ಅನೇಕ ರೈತರು ರಾಶಿ ರಾಶಿ ಕಡಲೆಯನ್ನು ತಂದು ಇಲ್ಲಿ ಮಾರುತ್ತಾರೆ. ಬೀದಿಬೀದಿಗಳಲ್ಲಿ ರಾಶಿರಾಶಿ ಕಡಲೆಕಾಯಿ ಹಾಕಿಕೊಂಡು ಮಾರಾಟ ಮಾಡಲಾಗುತ್ತದೆ.
ಕಡಲೆಕಾಯಿ ಪರಿಷೆಯ ಹಿನ್ನಲೆ: ಬಸವನಗುಡಿಯಲ್ಲಿ ಕಡಲೇಕಾಯಿ ಪರಿಷೆ ನಡೆಯುವುದರ ಹಿಂದೆ ನಿರ್ಧಿಷ್ಟ ಕಾರಣವಿದೆ. ಹಿಂದಿನ ಕಾಲದಲ್ಲಿ ರೈತರು ಬಸವನಗುಡಿಯ ಪಕ್ಕದ ಹಳ್ಳಿಗಳಲ್ಲಿ ಪ್ರತಿ ವರ್ಷ ನೆಲಗಡಲೆ ಬೆಳೆಯುತ್ತಿದ್ದರು. ಆದರೆ ಫಸಲು ಇನ್ನೇನು ಕೈ ಸೇರುತ್ತೆ ಅನ್ನೋ ಸಂದರ್ಭದಲ್ಲಿ ದೊಡ್ಡ ಬಸವವೊಂದು ಹೊಲಕ್ಕೆ ಬಂದು ಎಲ್ಲವನ್ನೂ ತಿಂದು ಹಾಕುತ್ತಿತ್ತು.ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಒಪ್ಪಿಸಲು ಆರಂಭಿಸಿದರು. ಇದಾದ ಬಳಿಕ ಬಸವ ಹೊಲಕ್ಕೆ ಬರುವುದನ್ನು ನಿಲ್ಲಿಸಿತು. ಅದೇ ಸಮಯದಲ್ಲಿ ಬಸವನಗುಡಿ ಪ್ರದೇಶದಲ್ಲಿ ನಂದಿಯ ವಿಗ್ರಹವೊಂದು ಪತ್ತೆಯಾಯಿತು. ಆ ಸ್ಥಳದಲ್ಲಿ ಮಾಗಡಿ ಕೆಂಪೇಗೌಡರು 1537ರಲ್ಲಿ ಗ್ರಾಮ ನಿರ್ಮಾಣ ಮಾಡಿದ್ದರು. ಈ ಗ್ರಾಮಕ್ಕೆ ಸುಂಕೇನಹಳ್ಳಿ ಎಂದು ಹೆಸರಿಟ್ಟರು. ಅಂದಿನಿಂದ ಇಲ್ಲಿ ನಂದಿಯನ್ನು ಪೂಜಿಸಿ, ಕಡಲೇಕಾಯಿ ಅಭಿಷೇಕ ಮಾಡಿ ಪರಿಷೆಯನ್ನು ಮಾಡಿಕೊಂಡು ಬರಲಾಗುತ್ತಿದೆ.
ಪ್ರತಿವರ್ಷವೂ ಕಾರ್ತಿಕ ಮಾಸದ ಕೊನೆಯ ಸೋಮವಾರ ಕಡಲೆಕಾಯಿ ಪರಿಷೆ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ನವೆಂಬರ್ 17 ಮತ್ತು 18 ಸೋಮವಾರ ಮತ್ತು ಮಂಗಳವಾರದಂದು ಉತ್ಸವ ನಡೆಯಲಿದೆ. ಸೋಮವಾರ, ಮಂಗಳವಾರದ ತನಕವೂ ಪರಿಷೆ ಇರುತ್ತದೆ. ಆರಂಭದಲ್ಲಿ ಬಸವನಗುಡಿಯ ದೊಡ್ಡ ಬಸವಣ್ಣನ ದೇವಸ್ಥಾನದಲ್ಲಿ ನಂದಿಗೆ ಕಡಲೇಕಾಯಿ ಅಭಿಷೇಕ ಮಾಡಿದ ಬಳಿಕ ಆವರಣದಲ್ಲಿ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆಯು ವಿಜೃಂಭಣೆಯಿಂದ ಆರಂಭವಾಗುತ್ತದೆ. ದೇವಾಲಯದಲ್ಲಿ ವಿಶೇಷಪೂಜೆ ಹಾಗೂ ಹೂವಿನ ಅಲಂಕಾರವನ್ನು ಮಾಡಿ, ಭಕ್ತರಿಗೆಲ್ಲಾ ಕಡಲೆಕಾಯಿಯನ್ನು ಪ್ರಸಾದವಾಗಿ ನೀಡಲಾಗುತ್ತದೆ.
ಪರಿಷೆಯ ಆಯೋಜನೆ ಕುರಿತು ಸಿದ್ಧತಾ ಸಭೆಯನ್ನು ಸಾರಿಗೆ ಹಾಗೂ ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಅಕ್ಟೋಬರ್ 23ರಂದು ಗುರುವಾರ ನಡೆಸಲಾಗುವುದು. ಈ ಸಭೆಯಲ್ಲಿ ಸ್ಥಳೀಯ ಶಾಸಕರು ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಬಾರಿ ಕಡಲೆಕಾಯಿ ಪರಿಷೆಗೆ ಯಾವುದೇ ರೀತಿಯ ಲೋಪವಾಗದಂತೆ ಅದ್ಧೂರಿಯಾಗಿ ನಡೆಸಲು ಯೋಜನೆ ಮಾಡಲಾಗುತ್ತಿದ್ದು, ಇದಕ್ಕೆ ತಕ್ಕಂತೆ ವ್ಯಾಪಾರಿಗಳಿಂದ ಯಾವುದೇ ರೀತಿಯ ಸುಂಕ ವಸೂಲಾತಿಯನ್ನು ನಿಷೇಧಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಅಲ್ಲದೇ ಈ ಬಾರಿಯ ಕಡಲೆಕಾಯಿ ಪರಿಷೆಯಲ್ಲಿ ಏನೆಲ್ಲ ವಿಶೇಷತೆಗಳು ಇರಲಿವೆ ಎಂಬುದರ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದೆ.
