ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಪಾಕಿಸ್ತಾನ ಮತ್ತು ಚೀನಾ ಪ್ರಜೆಗಳ ಸ್ಥಿರ ಆಸ್ತಿಗಳು ಪತ್ತೆಯಾಗಿವೆ. ಎನಿಮಿ ಪ್ರಾಪರ್ಟೀಸ್ ಕಾಯ್ದೆ ಅಡಿ ಇವುಗಳನ್ನು ಗುರುತಿಸಲಾಗಿದ್ದು, ರಾಜಭವನ ರಸ್ತೆ ಸೇರಿ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಈ ಆಸ್ತಿಗಳಿವೆ. ಸರ್ಕಾರವು ಇವುಗಳ ಮೌಲ್ಯಮಾಪನ ಪೂರ್ಣಗೊಳಿಸಿ, ಹರಾಜು ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸಿದೆ.

ಎನಿಮಿ ಪ್ರಾಪರ್ಟಿ ಎಂದರೇನು?

ಎನಿಮಿ ಪ್ರಾಪರ್ಟಿ ಕಾಯ್ದೆ (Enemy Property Act) ಅಡಿಯಲ್ಲಿ, ಭಾರತದಿಂದ ಪಾಕಿಸ್ತಾನ ಅಥವಾ ಚೀನಾಗೆ ಹೋಗಿ ಅಲ್ಲಿನ ನಾಗರಿಕತ್ವ ಪಡೆದವರ ಆಸ್ತಿಗಳನ್ನು ಭಾರತ ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಬಹುದು.ಈ ಆಸ್ತಿಗಳನ್ನು ಸಾರ್ವಜನಿಕ ಹಿತಕ್ಕಾಗಿ ಹರಾಜು ಮಾಡಬಹುದು.

ಆಸ್ತಿಗಳ ಸ್ಥಳಗಳು:

ಜಿಲ್ಲಾಡಳಿತದ ವರದಿ ಪ್ರಕಾರ, ಪಾಕಿಸ್ತಾನ ಮತ್ತು ಚೀನಾ ಪ್ರಜೆಗಳ ಆಸ್ತಿಗಳು ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಪತ್ತೆಯಾಗಿವೆ:

  1. ರಾಜಭವನ ರಸ್ತೆಯ ವಾರ್ಡ್ ನಂ.78, ಕಬ್ಬನ್ ರಸ್ತೆ ಬಳಿ, ಮ್ಯುನಿಸಿಪಲ್ ನಂ.3 ಮತ್ತು 5 ರಲ್ಲಿ ಒಟ್ಟು 1,23,504 ಚ.ಅಡಿ ವಿಸ್ತೀರ್ಣದ ಆಸ್ತಿ ಇದೆ. ಇದರ ಮಾಲೀಕ ಮರಿಯಮ್ ಮಿರ್ಜಾ ಖಲೀಲ್ ಆಗಿದ್ದಾರೆ. ಈ ಆಸ್ತಿಗೆ ಕ್ಯಾಪಿಟಲ್ ಹೋಟೆಲ್, ಪರಾಗ್ ಹೋಟೆಲ್, ಪ್ರೆಸ್ಟೀಜ್ ಸಿಗ್ಮಾ / ಹೆಚ್​ಪಿಸಿಎಲ್ ಪೆಟ್ರೋಲ್ ಬಂಕ್ ಬಾಡಿಗೆದಾರರಾಗಿದ್ದಾರೆ.
  2. ವಿಕ್ಟೋರಿಯಾ ರಸ್ತೆಯ ಸಿವಿಲ್ ಸ್ಟೇಷನ್ ಪ್ರದೇಶ, ಪ್ರೆಮೈಸಸ್ ನಂ.3 (ಹಳೆಯ ನಂ.2), ಬ್ಲಾಕ್ ನಂ.2 ಮತ್ತು 8 ರಲ್ಲಿ ಒಟ್ಟು 8,845 ಚ.ಅಡಿ ವಿಸ್ತೀರ್ಣದ ಆಸ್ತಿ ಇದ್ದು, ಇದರ ಮಾಲೀಕ ಜೋಸೆಫಿನ್ ರಾಜಮ್ಮಾ ಜೇವಿಯರ್ ಆಗಿದ್ದಾರೆ.
  3. ಕಲಾಸಿಪಾಳ್ಯದ 2ನೇ ಮೇನ್ ರಸ್ತೆ, ಪ್ಲಾಟ್ ನಂ.41 (ಹಳೆಯ), ನಂ.21 ರಲ್ಲಿರುವ ಆಸ್ತಿ 70’x30’ ವಿಸ್ತೀರ್ಣ ಹೊಂದಿದ್ದು ಸಯ್ಯದ್ ಒಬೇದುಲ್ಲಾ, ಸಯ್ಯದ್ ಸೈದುಲ್ಲಾ, ಸಯ್ಯದ್ ಸೈಫುಲ್ಲಾ, ಸಯ್ಯದ್ ಅಹ್ಮದುಲ್ಲಾ, ಸಯ್ಯದ್ ಶಮ್ಸುಲ್ಲಾ, ಸಯ್ಯದ್ ಅಮಿನಾ, ಬಾನಿ ನೂರ್ ಮಾಲೀಕರಾಗಿದ್ದಾರೆ.
  4. ಹಾಂಗ್​ಕಾಂಗ್ ಹೋಟೆಲ್, ನಂ.4, ಗ್ರಾಂಟ್ ರಸ್ತೆಯಲ್ಲಿ ಮೈಕಲ್ ಥಾಮ್ ಎಂಬವರ ಹೆಸರಿನಲ್ಲಿ ಕೂಡ ಎನಿಮಿ ಪ್ರಾಪರ್ಟಿ ಇರುವುದು ಪತ್ತೆಯಾಗಿದೆ.

ಈ ಪ್ರದೇಶಗಳು ಬೆಂಗಳೂರು ನಗರದ ಹೃದಯಭಾಗವಾಗಿದ್ದು, ಇಲ್ಲಿ ಇರುವ ಆಸ್ತಿಗಳ ಮೌಲ್ಯ ಸಾವಿರಾರು ಕೋಟಿ ರೂಪಾಯಿಗಳಷ್ಟಿದೆ.

ವರದಿ ಮತ್ತು ಕೇಂದ್ರ ಸರ್ಕಾರದ ಕ್ರಮ: ಜಿಲ್ಲಾಡಳಿತ ಈ ಆಸ್ತಿಗಳನ್ನು ಎನಿಮಿ ಪ್ರಾಪರ್ಟಿ (Enemy Property) ಎಂದು ಗುರುತಿಸಿ ಕಸ್ಟೋಡಿಯನ್ ಆಫ್ ಎನಿಮಿ ಪ್ರಾಪರ್ಟಿ ಫಾರ್ ಇಂಡಿಯಾಗೆ ವರದಿ ಸಲ್ಲಿಸಿದೆ. ಹರಾಜು ಪ್ರಕ್ರಿಯೆ ಆರಂಭಿಸಲು ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ಸರ್ಕಾರಿ ದರ ನಿಗದಿ ಕೂಡ ಪೂರ್ಣಗೊಂಡಿದೆ. ಕೇಂದ್ರ ಸರ್ಕಾರದ ಅನುಮತಿ ಬಂದ ನಂತರ, ಈ ಆಸ್ತಿಗಳನ್ನು ಹರಾಜು ಮಾಡುವ ಪ್ರಕ್ರಿಯೆ ಆರಂಭವಾಗಲಿದೆ. ಈ ಮೂಲಕ ಸಾರ್ವಜನಿಕ ಆದಾಯ ಹೆಚ್ಚಿಸುವ ಉದ್ದೇಶವಿದೆ.