5-Month-Old Baby Killed: ಐದು ತಿಂಗಳ ಮಗುವನ್ನು ಸಲಿಂಗ ಜೋಡಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೆಳಮಂಗಲಂನಲ್ಲಿ ನವೆಂಬರ್ 2ರಂದು ನಡೆದಿದೆ. ಮಗುವಿನ ತಾಯಿ ಹಾಗೂ ಆಕೆಯ ಜೊತೆಗಾತಿ ಸೇರಿ ಶಿಶುವನ್ನು ಹತ್ಯೆಗೈದಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಭಾರತಿ (26) ತಾನೇ ಹೆತ್ತ ಮಗುವನ್ನು ಹತ್ಯೆ ಮಾಡಿರುವ ಮಹಿಳೆಯಾಗಿದ್ದು, ಸ್ನೇಹಿತೆ ಸುಮಿತ್ರ ಜೊತೆ ಮಾತನಾಡುವುದಕ್ಕೆ ಮಗು ಅಡ್ಡಿಯಾಗುತ್ತಿದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾಳೆ. ಭಾರತಿ ತನ್ನ ಗಂಡ ಕೆಲಸಕ್ಕೆ ಹೋಗ್ತಿದ್ದಂತೆ ಸ್ನೇಹಿತೆ ಸುಮಿತ್ರ ಮನೆಗೆ ತೆರಳುತ್ತಿದ್ದಳು. ಆದರೆ ಮಗು ಹುಟ್ಟಿದ ಬಳಿಕ ಸಂಪರ್ಕಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸುಮಿತ್ರ ಕೊರಗುತ್ತಿದ್ದಳಂತೆ. ದಿನಕಳೆದಂತೆ ಮಗುವಿನಿಂದಾಗಿಯೇ ತನ್ನಿಂದ ಭಾರತಿ ದೂರವಾಗುತ್ತಿದ್ದಾಳೆ ಎಂದು ಭಾವಿಸಿದ್ದ ಸುಮಿತ್ರ, ಮಗುವನ್ನು ಹತ್ಯೆ ಮಾಡುವಂತೆ ಭಾರತಿಗೆ ಒತ್ತಡ ಹೇರಿದ್ದಳು. ಸುಮಿತ್ರ ಮಾತು ಕೇಳಿ ಭಾರತಿ ಮಗುವನ್ನೇ ಕೊಲ್ಲುವ ನಿರ್ಧಾರ ಮಾಡಿದ್ದಾಳೆ.
ಭಾರತಿಯು ಅದೇ ಗ್ರಾಮದ ಸುಮಿತ್ರಾ ಎಂಬಾಕೆ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ಕೂಡಲೇ ಪತಿ ಸುರೇಶ್ ಕೋಪಗೊಂಡಿದ್ದಾರೆ. ಇದು ಗಂಡ-ಹೆಂಡತಿಯ ನಡುವೆ ಜಗಳಕ್ಕೆ ಕಾರಣವಾಗಿದೆ. ಇದರಿಂದ ಈ ದಂಪತಿಯ ಮಕ್ಕಳನ್ನು ಸುರೇಶ್ ಸಹೋದರಿ ನೋಡಿಕೊಳ್ಳುತ್ತಿದ್ದರು. ಪತಿ-ಪತ್ನಿ ನಡುವೆ ಭಿನ್ನಾಭಿಪ್ರಾಯ ತೀವ್ರವಾಗುತ್ತಿದ್ದಂತೆ ಭಾರತಿ ಗಂಡನ ಮನೆ ಬಿಟ್ಟು, ತನ್ನ ತವರು ಮನೆ ಕುಂತುಮಾರನಪಲ್ಲಿ ಗ್ರಾಮಕ್ಕೆ ತೆರಳಿದಳು.

5 ತಿಂಗಳ ಹಿಂದೆಯಷ್ಟೇ ಭಾರತಿ ಗಂಡು ಮಗುವಿಗೆ ಜನ್ಮ‌ ನೀಡಿದ್ದಳು. ಮಗು ಆದಾಗಿನಿಂದ ಭಾರತಿ ತನ್ನನ್ನ ದೂರ ಮಾಡ್ತಿದ್ದಾಳೆಂದು ಸುಮಿತ್ರಾ ಜಗಳವಾಡುತ್ತಿದ್ದಳು. ಇಬ್ಬರ ಜಗಳಕ್ಕೆ ಕಾರಣವಾದ ಮಗುವನ್ನ ಕೊಲೆ ಮಾಡುವಂತೆ ಸುಮಿತ್ರಾ ಸಲಹೆ ನೀಡಿದ್ದಳು ಈ ಸಲಹೆಯನ್ನು ಕೇಳಿದ ಭಾರತಿ ಮಗುವನ್ನು ಹತ್ಯೆ ಮಾಡಿ, ಹಾಲುಕುಡಿಯುವಾಗ ನೆತ್ತಿಗೇರಿ ಮಗು ಮೃತಪಟ್ಟಿದೆ ಎಂದು ಮನೆಯವರನ್ನು ನಂಬಿಸಿದ್ದಳು. ಬಳಿಕ ಮಗುವಿನ ಅಂತ್ಯಸಂಸ್ಕಾರವೂ ನಡೆದಿತ್ತು.
ಹಲವು ದಿನಗಳ ಬಳಿಕ ಭಾರತಿ ಮೊಬೈಲ್ ನೋಡಿದ್ದ ಆಕೆಯ ಪತಿಗೆ, ಭಾರತಿ- ಸುಮಿತ್ರ ನಡುವಿನ ಸಂಬಂಧದ ಬಗ್ಗೆ ನಿಜ ತಿಳಿದಿದೆ ಅಷ್ಟೇ ಅಲ್ಲದೇ ಮಗುವನ್ನು ಹತ್ಯೆ ಮಾಡುವಂತೆ ಸುಮಿತ್ರಾ ನೀಡಿದ್ದ ಸಲಹೆಯೂ ಬಹಿರಂಗಗೊಂಡಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಕೆಲಮಂಗಲಂ ಪೊಲೀಸ್ ಠಾಣೆಯಲ್ಲಿ ಭಾರತಿ ಮತ್ತು ಸುಮಿತ್ರಾ ಇಬ್ಬರನ್ನ ಬಂಧಿಸಲಾಗಿದೆ.
ಅವರಿಬ್ಬರ ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಭಾರತಿ ಹಾಗೂ ಸುಮಿತ್ರಾಳು ಮಗುವನ್ನು ಕೊಲ್ಲುವ ಬಗ್ಗೆ ಮಾಡಿರುವ ಮೆಸೇಜ್ ಹಾಗೂ ಮಗು ಮೃತಪಟ್ಟ ನಂತರ ಅದರ ದೇಹದ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಆರೋಪಿಗಳಾದ ಭಾರತಿ ಹಾಗೂ ಸುಮಿತ್ರಾಳ ಫೋಟೋ ಹಾಗೂ ವಿಡಿಯೊಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರಾಗಿರುವ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.