ಗೂಗಲ್ ಮೀಟ್ ಸೇವೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ, ದೇಶದ ಹಲವೆಡೆ ಬಳಕೆದಾರರು ಸಭೆಗಳಿಗೆ ಲಾಗಿನ್ ಆಗಲು ಸಾಧ್ಯವಾಗಲಿಲ್ಲ. ಆಫೀಸ್ ಮೀಟಿಂಗ್ಗಳು, ಆನ್ಲೈನ್ ಕ್ಲಾಸ್ಗಳು, ವೆಬಿನಾರ್ಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡವು. ಬಳಕೆದಾರರು “ಸರ್ವರ್ not responding, unable to join meeting” ಎಂಬ ಸಂದೇಶಗಳನ್ನು ಎದುರಿಸಿದರು.
ತೊಂದರೆಯ ಸ್ವರೂಪ
ವೀಡಿಯೋ ಹಾಗೂ ಆಡಿಯೋ ಸಂಪರ್ಕ ಕಡಿತ. ಸ್ಕ್ರೀನ್ ಶೇರ್, ಚಾಟ್, ರೆಕಾರ್ಡಿಂಗ್ ಕಾರ್ಯ ನಿರ್ವಹಿಸಲಿಲ್ಲ. ಕೆಲವು ಪ್ರದೇಶಗಳಲ್ಲಿ ಸಂಪೂರ್ಣ ಸೇವೆ ಡೌನ್ ಆಗಿತ್ತು.
ಪರಿಣಾಮ
ಕಂಪನಿಗಳ ಆಫೀಸ್ ಸಭೆಗಳು ಅಡಚಣೆಗೆ ಒಳಗಾದವು. ಶಾಲೆ–ಕಾಲೇಜುಗಳ ಆನ್ಲೈನ್ ಕ್ಲಾಸ್ಗಳು ಸ್ಥಗಿತಗೊಂಡವು. ಫ್ರೀಲಾನ್ಸ್ ಹಾಗೂ ಸ್ಟಾರ್ಟ್ಅಪ್ಗಳು ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಬೇಕಾಯಿತು.
ಸಮಸ್ಯೆ ಬಗ್ಗೆ ದೂರು ದಾಖಲು
ತಾಂತ್ರಿಕ ದೋಷ ಮೇಲ್ವಿಚಾರಣಾ ವೇದಿಕೆಯಾದ ಡೌನ್ಡೆಕ್ಟರ್ ನೀಡಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ ಮಂಗಳವಾರ ಮಧ್ಯಾಹ್ನ 12:20 ರ ಸುಮಾರಿಗೆ ಕನಿಷ್ಠ 1,455 ಜನರು ಗೂಗಲ್ ಮೀಟ್ನಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಬಹುತೇಕ ಬಳಕೆದಾರರು ತಾವು ವೆಬ್ಸೈಟ್ ಮೂಲಕ ಗೂಗಲ್ ಮೀಟ್ ಸಭೆಗೆ ಸೇರಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟು ವರದಿಗಳಲ್ಲಿ ಶೇ.79 ರಷ್ಟು ದೂರುಗಳು ಮೀಟಿಂಗ್ ಪ್ರಾರಂಭಿಸುವಲ್ಲಿನ ತೊಂದರೆಗಳ ಬಗ್ಗೆ ಇದ್ದರೆ, ಶೇ.16 ರಷ್ಟು ವರದಿಗಳು ಸರ್ವರ್ ಸಂಪರ್ಕ ಸಮಸ್ಯೆಗಳಿಗೆ ಸಂಬಂಧಿಸಿವೆ. ಉಳಿದ ಶೇ.5 ರಷ್ಟು ವರದಿಗಳು ಅಪ್ಲಿಕೇಶನ್ ಬಳಸುವಲ್ಲಿನ ಸಮಸ್ಯೆಗಳ ಬಗ್ಗೆ ದೂರು ನೀಡಿವೆ.
ಈ ವರ್ಷದ ಆರಂಭದಲ್ಲಿ ಅಮೆರಿಕದಲ್ಲಿ ಕೂಡ ಇದೇ ರೀತಿಯ ಅಡಚಣೆ ಉಂಟಾಗಿತ್ತು. ಅಂದು 15,000ಕ್ಕೂ ಹೆಚ್ಚು ಬಳಕೆದಾರರಿಗೆ ಗೂಗಲ್ ಮೀಟ್ ಸೇವೆಯಲ್ಲಿ ಸಮಸ್ಯೆ ಉಂಟಾಗಿ, ತಮ್ಮ ಕರ್ತವ್ಯದಲ್ಲಿ ಭಾಗಿಯಾಗಲು ಆಗದೆ ಪರದಾಡಿದ್ದರು.
ಗೂಗಲ್ ಪ್ರತಿಕ್ರಿಯೆ
ಗೂಗಲ್ ತಾಂತ್ರಿಕ ತಂಡವು ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಕಟಿಸಿದೆ. “ಸರ್ವರ್ನಲ್ಲಿ ತಾಂತ್ರಿಕ ದೋಷ ಉಂಟಾಗಿದೆ, ಶೀಘ್ರದಲ್ಲೇ ಸೇವೆ ಪುನಃಸ್ಥಾಪನೆಗೊಳ್ಳಲಿದೆ” ಎಂದು ತಿಳಿಸಿದೆ.
ಗೂಗಲ್ ಮೀಟ್ನಲ್ಲಿ ಉಂಟಾದ ತಾಂತ್ರಿಕ ತೊಂದರೆ ಆಫೀಸ್ ಕೆಲಸ, ಶಿಕ್ಷಣ, ಆನ್ಲೈನ್ ಸಂವಹನಕ್ಕೆ ದೊಡ್ಡ ಅಡಚಣೆ ತಂದಿದೆ. ಗೂಗಲ್ ತಂಡ ಸಮಸ್ಯೆ ಪರಿಹರಿಸಲು ಮುಂದಾಗಿದ್ದು, ಸೇವೆ ಶೀಘ್ರದಲ್ಲೇ ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ.
