ಬೆಂಗಳೂರು: ಹೈಕಮಾಂಡ್ ಬೆನ್ನಲ್ಲೇ ಕಾಂಗ್ರೆಸ್ ಸಂಪುಟ ವಿಸ್ತರಣೆಯ 20 ಶಾಸಕರ ಅಂತಿಮ ಪಟ್ಟಿ ಹೊರಬಿದ್ದ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ನಲ್ಲಿ ಅಸಮಾಧಾನದ ಬೆಂಕಿ ಭುಗಿಲೆದ್ದಿದೆ. ಮಂತ್ರಿಗಿರಿ ಕೈತಪ್ಪಿದ್ದಕ್ಕೆ ಕಂಗಾಲಾಗಿರುವ ಹಿರಿಯ ಶಾಸಕರು ರಾಜೀನಾಮೆ ಪರ್ವಕ್ಕೆ ಚಾಲನೆ ನೀಡಿದ್ದು, ಹೈಕಮಾಂಡ್ ಮಾತ್ರ ಈ ಬೆದರಿಕೆಗಳಿಗೆ ಕ್ಯಾರೇ ಎನ್ನದೆ ಖಡಕ್ ಸೂಚನೆ ರವಾನಿಸಿದೆ.
ಅಸಮಾಧಾನಿತ ಶಾಸಕರ ರಾಜೀನಾಮೆ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ವರಿಷ್ಠರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕರೆ ಮಾಡಿ ವಸ್ತುಸ್ಥಿತಿಯ ವಿವರಣೆ ಪಡೆದುಕೊಂಡಿದ್ದಾರೆ. ‘ಸಚಿವ ಸ್ಥಾನ ಸಿಗದ ನಾಯಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗುವುದು. ಅದನ್ನು ಮೀರಿಯೂ ಯಾರಾದರೂ ರಾಜೀನಾಮೆ ನೀಡಿದರೆ ತಕ್ಷಣವೇ ಅಂಗೀಕರಿಸಿ’ ಎಂದು ಹೈಕಮಾಂಡ್ ಸಿಎಂಗೆ ಸ್ಪಷ್ಟ ನಿರ್ದೇಶನ ನೀಡಿದೆ ಎನ್ನಲಾಗಿದೆ. ನೂತನ ಸಚಿವರ ಪ್ರಮಾಣವಚನಕ್ಕೂ ಮುನ್ನವೇ ವರಿಷ್ಠರು ತಳೆದಿರುವ ಈ ಕಠಿಣ ನಿಲುವು ಪಕ್ಷದೊಳಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇನ್ನೊಂದೆಡೆ, ಮಂತ್ರಿಗಿರಿ ಸಿಗದ್ದಕ್ಕೆ ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಸ್ಪೀಕರ್ ರುದ್ರಪ್ಪ ಲಮಾಣಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ತೀವ್ರ ಅಸಮಾಧಾನ ಹೊರಹಾಕಿದ್ದು, ನಾಳೆ ಬೆಳಿಗ್ಗೆ ತಮ್ಮ ಶಾಸಕ ಸ್ಥಾನ ಹಾಗೂ ನಿಗಮ ಮಂಡಳಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.
ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಕೂಡ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “30-40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಬಿಜೆಪಿಯವರು 50 ಕೋಟಿ ರೂ. ಆಫರ್ ನೀಡಿದ್ದರೂ ಹೋಗಲಿಲ್ಲ. ಆದರೆ ಮಂತ್ರಿ ಮಾಡುವುದಾಗಿ ಹೇಳಿ ಈಗ ಮೋಸ ಮಾಡಿದ್ದಾರೆ. 136 ಸ್ಥಾನ ಬಂದಿದೆ ಎಂಬ ಅಹಂ ಕಾಂಗ್ರೆಸ್ಗೆ ಬಂದಿದೆ. ನಾಳೆ ಕ್ಷೇತ್ರದ ಜನರೊಂದಿಗೆ ಸಭೆ ನಡೆಸಿ, ಅವರ ನಿರ್ಧಾರದಂತೆ ರಾಜೀನಾಮೆ ನೀಡುತ್ತೇನೆ” ಎಂದು ಎಚ್ಚರಿಸಿದ್ದಾರೆ.
