ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಕಂಡ 408 ರನ್ ಗಳ ಹೀನಾಯ ಸೋಲು ಟೀಂ ಇಂಡಿಯಾ ರನ್ ಗಳ ಲೆಕ್ಕಾಚಾರದಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದಲ್ಲಿ ಕಂಡ ಅತ್ಯಂತ ಹೀನಾಯ ಸೋಲಾಗಿದೆ.

ಗುವಾಹತಿಯ ಬರ್ಸಾಪಾರಾ ಕ್ರೀಡಾಂಗಣದಲ್ಲಿ ಇಂದು ಮುಕ್ತಾಯವಾದ 2ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 548 ರನ್ ಗಳ ಗುರಿ ಬೆನ್ನು ಹತ್ತಿದ ಭಾರತ ತಂಡ ಕೇವಲ 140 ರನ್ ಗಳಿಗೇ ಆಲೌಟ್ ಆಗುವ ಮೂಲಕ ಬರೊಬ್ಬರಿ 408 ರನ್ ಗಳ ಅಂತರದ ಹೀನಾಯ ಸೋಲು ಕಂಡಿದೆ. ಈ ಮೂಲಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕು ಎಂಬ ದಕ್ಷಿಣ ಆಫ್ರಿಕಾ ಕನಸು ಕೊನೆಗೂ ನನಸಾಗಿದ್ದು, ಬರೊಬ್ಬರಿ 26 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಹಿಂದೆ ಅಂದರೆ 1999ರಲ್ಲಿ ಕೊನೆಯ ಬಾರಿಗೆ ಭಾರತದಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಗೆದ್ದಿತ್ತು.

ಇನ್ನು ಇಂದು ಪಂದ್ಯ ಸೋಲುವ ಮೂಲಕ ಭಾರತ ತಂಡ ಕಳಪೆ ದಾಖಲೆಗಳ ಪಟ್ಟಿಯನ್ನೇ ನಿರ್ಮಿಸಿದೆ. ಭಾರತದಲ್ಲಿ ಟೀಂ ಇಂಡಿಯಾ ಸತತ 2 ಟೆಸ್ಟ್ ಸರಣಿ ಸೋಲು ಮೂಲಕ ಹೀನಾಯ ದಾಖಲೆ ಬರೆದಿದೆ.ಈ ಹಿಂದೆ 2000ರಲ್ಲಿ ಭಾರತದಲ್ಲಿ ಇದೇ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ (ಕ್ಲೀನ್ ಸ್ವೀಪ್) ಸೋತಿದ್ದ ಟೀಂ ಇಂಡಿಯಾ ಬಳಿಕ 24 ವರ್ಷಗಳ ಬಳಿಕ ಅಂದರೆ 2024ರಲ್ಲಿ ನ್ಯೂಜಿಲೆಂಡ್ ವಿರುದ್ಧ 0-3 ಅಂತರದಲ್ಲಿ ಕ್ಲೀನ್ ಸ್ವೀಪ್ ಮೂಲಕ ಟೆಸ್ಟ್ ಸರಣಿ ಸೋತಿತ್ತು.ಇದೀಗ ಮತ್ತೆ 2025ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೂ 0-2 ಅಂತರದಲ್ಲಿ ಕ್ಲೀನ್ ಸ್ವೀಪ್ ಆಗುವ ಮೂಲಕ ಟೆಸ್ಟ್ ಸರಣಿ ಕೈಚೆಲ್ಲಿದೆ.

ಪಂದ್ಯ ವಿವರ

  • ಸ್ಥಳ: ಗುವಾಹಟಿ, 2ನೇ ಟೆಸ್ಟ್ (ನ.22–26, 2025).
  • ದಕ್ಷಿಣ ಆಫ್ರಿಕಾ: 1ನೇ ಇನ್ನಿಂಗ್ಸ್ – 489 ರನ್ (ಸೆನುರನ್ ಮುತ್ತುಸಾಮಿ 109, ಮಾರ್ಕೋ ಜಾನ್ಸನ್ 93).
  • ಭಾರತ: 1ನೇ ಇನ್ನಿಂಗ್ಸ್ – 201 ರನ್ (ಕುಲದೀಪ್ ಯಾದವ್ 4 ವಿಕೆಟ್).
  • ದಕ್ಷಿಣ ಆಫ್ರಿಕಾ: 2ನೇ ಇನ್ನಿಂಗ್ಸ್ – 260/5 ಡಿಕ್ಲೇರ್.
  • ಭಾರತ: 2ನೇ ಇನ್ನಿಂಗ್ಸ್ – 140 ರನ್ ಆಲ್ ಔಟ್.
  • ಫಲಿತಾಂಶ: ದಕ್ಷಿಣ ಆಫ್ರಿಕಾ 408 ರನ್‌ಗಳಿಂದ ಗೆಲುವು ಸಾಧಿಸಿ, 2-0 ಅಂತರದಲ್ಲಿ ಸರಣಿ ಜಯ.

ಭಾರತ–ದಕ್ಷಿಣ ಆಫ್ರಿಕಾ ಸರಣಿ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಆಗಿದ್ದು, ಇದು ಭಾರತಕ್ಕೆ ಗೃಹಮೈದಾನದಲ್ಲಿ ಅಪಮಾನಕಾರಿ ಸೋಲು. ದಕ್ಷಿಣ ಆಫ್ರಿಕಾ 25 ವರ್ಷಗಳ ಬಳಿಕ ಭಾರತದಲ್ಲಿ ಸರಣಿ ಗೆದ್ದು, ತಮ್ಮ ಶಕ್ತಿಯನ್ನು ಸಾಬೀತುಪಡಿಸಿದೆ. ಈ ಸೋಲು ಭಾರತ ತಂಡದ ಬ್ಯಾಟಿಂಗ್ ತಂತ್ರ, ಶಿಸ್ತಿನ ಕೊರತೆ, ಹಾಗೂ ಹವಾಮಾನ–ಪಿಚ್ ಅಂದಾಜು ವೈಫಲ್ಯಗಳನ್ನು ಬಯಲಿಗೆಳೆದಿದೆ.