Share This News

ಬೆಂಗಳೂರಿನ PGಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಮತ್ತು ಅನೈರ್ಮಲ್ಯದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು GBA ವ್ಯಾಪ್ತಿಯಲ್ಲಿ ಒಟ್ಟು 64 PGಗಳನ್ನು ಪರಿಶೀಲಿಸಲಾಗಿದ್ದು, 23 PGಗಳಿಗೆ ನೋಟಿಸ್ ನೀಡಲಾಗಿದೆ.

ಎಕ್ಸ್‌ಪೈರಿ ಆಹಾರ ವಶಕ್ಕೆ

ಪರಿಶೀಲನೆ ವೇಳೆ ಕೆಲವು PGಗಳಲ್ಲಿ ಅವಧಿ ಮೀರಿದ ಮೊಸರು, ಬಿಸಿಬೇಳೆ ಬಾತ್ ಪೌಡರ್, ಅಕ್ಕಿ ಹಿಟ್ಟು, ಸಿಂಥೆಟಿಕ್ ಫುಡ್ ಕಲರ್, ಕಾಳುಮೆಣಸು ಮತ್ತು ತಪ್ಪು ಲೇಬಲ್ ಹೊಂದಿದ್ದ ಆಹಾರ ಪದಾರ್ಥಗಳು ಪತ್ತೆಯಾಗಿವೆ.

ಇವುಗಳನ್ನು ಅಧಿಕಾರಿಗಳು ಕಾನೂನುಬದ್ಧವಾಗಿ ವಶಪಡಿಸಿಕೊಂಡಿದ್ದಾರೆ.

12 ಆಹಾರ ಮಾದರಿ ಲ್ಯಾಬ್‌ಗೆ

ಆಹಾರದ ಗುಣಮಟ್ಟ ಮತ್ತು ಆಹಾರ ಸುರಕ್ಷತಾ ಮಾನದಂಡಗಳ ಪಾಲನೆ ಪರಿಶೀಲಿಸಲು ಒಟ್ಟು 12 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ.

ಡೈನಿಂಗ್ ಟೇಬಲ್ ಮೇಲೆ ಬೆಡ್‌ಬಗ್ ಪೌಡರ್!

ಬೊಮ್ಮಸಂದ್ರದ ನಂದನಾ ಎಲೈಟ್ PGಯಲ್ಲಿ ಆಹಾರ ಪದಾರ್ಥಗಳಿದ್ದ ಡೈನಿಂಗ್ ಟೇಬಲ್ ಮೇಲೆಯೇ ಬೆಡ್‌ಬಗ್ ಪೌಡರ್ ಇಟ್ಟಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಇದಲ್ಲದೆ, ಕುಡಿಯುವ ನೀರಿನ ವ್ಯವಸ್ಥೆ ಇರುವ ಪ್ರದೇಶದಲ್ಲಿ ಆಹಾರಕ್ಕೆ ಸಂಬಂಧಿಸದ ವಸ್ತುಗಳನ್ನು ಸಂಗ್ರಹಿಸಿರುವುದು ಸೇರಿದಂತೆ ಹಲವು ಸ್ವಚ್ಛತಾ ಲೋಪಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಡೈನಿಂಗ್ ಪ್ರದೇಶವನ್ನು ಸೀಲ್ ಮಾಡಲಾಗಿದೆ.

PG ಮಾಲೀಕರಿಗೆ ಎಚ್ಚರಿಕೆ

PG ಮಾಲೀಕರು ಮತ್ತು ಆಹಾರ ನಿರ್ವಹಣೆಯಲ್ಲಿ ತೊಡಗಿರುವವರು ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಇಲಾಖೆ ಸೂಚಿಸಿದೆ.

ಆಹಾರವನ್ನು ಸುರಕ್ಷಿತವಾಗಿ ಸಂಗ್ರಹಿಸುವುದು, ಗುಣಮಟ್ಟದ ಕಚ್ಚಾವಸ್ತು ಬಳಸುವುದು, ಅಡುಗೆಮನೆ ಸ್ವಚ್ಛವಾಗಿಡುವುದು ಹಾಗೂ ಅವಧಿ ಮೀರಿದ ಆಹಾರವನ್ನು ಬಳಸದೆ ಇರುವುದು ಕಡ್ಡಾಯ ಎಂದು ಇಲಾಖೆ ಎಚ್ಚರಿಸಿದೆ. ನಿಯಮ ಉಲ್ಲಂಘನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.


Share This News