ಬೆಂಗಳೂರು: ರಾಜ್ಯ ರಾಜಕಾರಣದ ಹಿರಿಯ ಮುಖಂಡರು ಹಾಗೂ ರಾಜ್ಯ ಸರ್ಕಾರದ ಹಾಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಸುಧಾಕರ್ ಅವರು ಇಂದು ವಿಧಿವಶರಾಗಿದ್ದಾರೆ. ಈ ವಿಚಾರ ರಾಜಕೀಯ ಲೋಕಕ್ಕೆ ಮತ್ತು ರಾಜ್ಯಕ್ಕೆ ನುಂಗಲಾರದ ತುತ್ತಾಗಿದೆ. ಇಂದು ಬೆಳಿಗ್ಗೆ ಸಂಭವಿಸಿದ ಈ ಅನಿರೀಕ್ಷಿತ ಘಟನೆಯು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ.

ಸಚಿವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದು, ಗೌರವ ಸೂಚಕವಾಗಿ ಇಂದಿನಿಂದಲೇ ಅನ್ವಯವಾಗುವಂತೆ ಮೂರು ದಿನಗಳ ಕಾಲ ರಾಜ್ಯಾದ್ಯಂತ ಅಧಿಕೃತ ಶೋಕಾಚರಣೆ ಘೋಷಿಸಿದೆ. ಇದರೊಂದಿಗೆ ಸಚಿವರ ತವರು ಜಿಲ್ಲೆಯಾದ ಚಿತ್ರದುರ್ಗದಲ್ಲಿ ನಾಳೆ ಅಂದರೆ ಮೇ 11ರ ಸೋಮವಾರದಂದು ಸಾರ್ವಜನಿಕ ರಜೆಯನ್ನು ಪ್ರಕಟಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಡಿ. ಸುಧಾಕರ್ ಅವರು ಹಿರಿಯ ಸಚಿವರಾಗಿ ಸಲ್ಲಿಸಿದ ಸೇವೆ ಪರಿಗಣಿಸಿ, ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಜಿಲ್ಲಾಡಳಿತವು ಅಂತ್ಯಕ್ರಿಯೆಯ ಸ್ಥಳದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಮತ್ತು ಗೌರವ ವಂದನೆಗೆ ಸಕಲ ಸಿದ್ಧತೆಗ ಮಾಡಿಕೊಳ್ಳುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸಂಪುಟದ ಹಲವು ಸಚಿವರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಚಿತ್ರದುರ್ಗಕ್ಕೆ ಆಗಮಿಸುವ ನಿರೀಕ್ಷೆಯಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.