ಉತ್ತರ ಪ್ರದೇಶದಲ್ಲಿ 16 ವರ್ಷದ 11ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪದ ಭೀಕರ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಮತ್ತು ಕಂಡಕ್ಟರ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಕುಟುಂಬದವರೊಂದಿಗೆ ಜಗಳ ಮಾಡಿಕೊಂಡಿದ್ದ ಬಾಲಕಿ ನೋಯ್ಡಾದಲ್ಲಿರುವ ಸಂಬಂಧಿಕರ ಮನೆಗೆ ತೆರಳುತ್ತಿದ್ದಳು ಎನ್ನಲಾಗಿದೆ. ಈ ವೇಳೆ ಭಾರಿ ಮಳೆಯಿಂದಾಗಿ ದಾರಿ ತಪ್ಪಿದ ಆಕೆ ಗ್ರೇಟರ್ ನೋಯ್ಡಾದ ಪರಿಚೌಕ್ ಬಳಿ ಇಳಿದಿದ್ದಳು.
ಮಳೆಯಲ್ಲಿ ಸಿಲುಕಿದ್ದ ಬಾಲಕಿ ಸಹಾಯಕ್ಕಾಗಿ ರಸ್ತೆಯಲ್ಲಿ ಬರುತ್ತಿದ್ದ ಖಾಲಿ ಸ್ಲೀಪರ್ ಬಸ್‌ಗೆ ಕೈ ಅಡ್ಡಹಾಕಿದ್ದಾಳೆ ಎನ್ನಲಾಗಿದೆ. ಬಸ್ ನೋಯ್ಡಾಗೆ ತೆರಳಲಿದೆ ಎಂದು ನಂಬಿಸಿ ಚಾಲಕ ಮತ್ತು ಕಂಡಕ್ಟರ್ ಬಾಲಕಿಯನ್ನು ಬಸ್‌ಗೆ ಹತ್ತಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಚಲಿಸುತ್ತಿದ್ದ ವೇಳೆ ಬಾಲಕಿ ಮೇಲೆ ಇಬ್ಬರು ಆರೋಪಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಬಾಲಕಿ ಕಿರುಚಾಡಿದಾಗ ಬೆದರಿಕೆ ಹಾಕಿ, ಸುಮಾರು 47 ಕಿಲೋಮೀಟರ್ ದೂರ ಕರೆದೊಯ್ದು ದೆಹಲಿಯ ಕಾಶ್ಮೀರಿ ಗೇಟ್ ಪ್ರದೇಶದ ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ತನಿಖೆಯ ಬಳಿಕ ಬಸ್ ಚಾಲಕ ಕುಲದೀಪ್ ಮತ್ತು ಕಂಡಕ್ಟರ್ ಸಂದೀಪ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದು, ಬಾಲಕಿಗೆ ಅಗತ್ಯ ರಕ್ಷಣೆ ಮತ್ತು ನೆರವು ಒದಗಿಸಲಾಗುತ್ತಿದೆ.
ಸೂಚನೆ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತೆಯ ಗುರುತನ್ನು ಬಹಿರಂಗಪಡಿಸುವ ಯಾವುದೇ ವಿವರಗಳನ್ನು ಪ್ರಕಟಿಸುವುದು ಕಾನೂನುಬದ್ಧವಾಗಿ ನಿರ್ಬಂಧಿತವಾಗಿರಬಹುದು.
