ಚಿಕ್ಕಮಗಳೂರು: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹೊರನಾಡಿನಲ್ಲಿ ಪ್ರವಾಸಿಗರಿಗೆ ನೀಡಿದ್ದ ಉದ್ದಿನ ವಡೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.
ಹೊರನಾಡಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಆರು ಮಂದಿ ಪ್ರವಾಸಿಗರ ತಂಡವೊಂದು ತಿಂಡಿಗಾಗಿ ಖಾಸಗಿ ಹೋಟೆಲ್‌ಗೆ ತೆರಳಿತ್ತು. ಅಲ್ಲಿ ಉದ್ದಿನ ವಡೆ ಆರ್ಡರ್ ಮಾಡಿ ಸೇವಿಸುತ್ತಿದ್ದ ವೇಳೆ, ವಡೆಯೊಳಗೆ ಎಣ್ಣೆಯಲ್ಲಿ ಬೆಂದುಹೋಗಿದ್ದ ಸತ್ತ ಹಲ್ಲಿ ಪತ್ತೆಯಾಗಿದೆ ಎಂದು ಪ್ರವಾಸಿಗರು ಆರೋಪಿಸಿದ್ದಾರೆ.
ಅರ್ಧ ವಡೆ ತಿಂದ ಬಳಿಕ ಹಲ್ಲಿ ಪತ್ತೆ
ಪ್ರವಾಸಿಗರು ವಡೆಯನ್ನು ಸೇವಿಸುತ್ತಿದ್ದ ವೇಳೆ, ಅರ್ಧದಷ್ಟು ತಿಂದ ಬಳಿಕ ಅದರೊಳಗೆ ಹಲ್ಲಿ ಇರುವುದನ್ನು ಗಮನಿಸಿದ್ದಾರೆ ಎನ್ನಲಾಗಿದೆ. ಇದರಿಂದ ಪ್ರವಾಸಿಗರು ಆತಂಕಗೊಂಡಿದ್ದಾರೆ.
ವಡೆಯನ್ನು ಸಣ್ಣ ಮಕ್ಕಳೂ ಸೇವಿಸಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸುವಂತೆ ಪ್ರವಾಸಿಗ ಅಭಿಷೇಕ್ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಹೋಟೆಲ್ ಮಾಲೀಕರ ವಿರುದ್ಧ ಆಕ್ರೋಶ
ಘಟನೆ ಕುರಿತು ಹೋಟೆಲ್ ಮಾಲೀಕರನ್ನು ಪ್ರಶ್ನಿಸಿದಾಗ ಸೂಕ್ತವಾಗಿ ಸ್ಪಂದಿಸದೆ ಜಗಳಕ್ಕೆ ಇಳಿದರು ಎಂದು ಪ್ರವಾಸಿಗರು ಆರೋಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪ್ರವಾಸಿಗರು ತಕ್ಷಣವೇ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಕಳಸ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಮೊದಲು ಆರೋಗ್ಯ ತಪಾಸಣೆ ಮುಖ್ಯ ಎಂದು ತಿಳಿಸಿ, ಮಕ್ಕಳು ಸೇರಿದಂತೆ ಪ್ರವಾಸಿಗರನ್ನು ಕಳಸದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ವೈದ್ಯಕೀಯ ತಪಾಸಣೆಯಲ್ಲಿ ಆರೋಗ್ಯ ಸಮಸ್ಯೆ ಪತ್ತೆಯಾಗಿಲ್ಲ
ಅದೃಷ್ಟವಶಾತ್ ವೈದ್ಯಕೀಯ ಪರೀಕ್ಷೆಯ ಸಂದರ್ಭದಲ್ಲಿ ಪ್ರವಾಸಿಗರು ಹಾಗೂ ಮಕ್ಕಳಲ್ಲಿ ಯಾವುದೇ ವಿಷಪೂರಿತ ಲಕ್ಷಣಗಳು ಅಥವಾ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
ಪರೀಕ್ಷೆಯ ಬಳಿಕ ಪ್ರವಾಸಿಗರು ಬೆಂಗಳೂರಿಗೆ ಹಿಂದಿರುಗಿದ್ದಾರೆ.
ಹೊರನಾಡಿನಂತಹ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಆಹಾರ ನೀಡುವ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತೆ, ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಆಗ್ರಹ ಇದೀಗ ಕೇಳಿಬಂದಿದೆ.
