ಕಠ್ಮಂಡು: ನೇಪಾಳದ ತ್ರಿಶೂಲಿ ಕಣಿವೆಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಕೆಸರು ಕುಸಿತದ ನಡುವೆ ಪ್ರಾಂಶುಪಾಲರೊಬ್ಬರ ಸಮಯಪ್ರಜ್ಞೆಯಿಂದ 1,643 ವಿದ್ಯಾರ್ಥಿಗಳು ಸುರಕ್ಷಿತವಾಗಿ ಪಾರಾದ ಘಟನೆ ಗಮನ ಸೆಳೆದಿದೆ.
ತ್ರಿಭುವನ್ ತ್ರಿಶೂಲಿ ಪ್ರೌಢಶಾಲೆಯ 47 ವರ್ಷದ ಪ್ರಾಂಶುಪಾಲ ರಾಜೇಂದ್ರ ದಾವಾಡಿ ಅವರು ಅಪಾಯದ ಪರಿಸ್ಥಿತಿಯನ್ನು ಅರಿತು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ ಎನ್ನಲಾಗಿದೆ.
ಬುಧವಾರ ಬೆಳಿಗ್ಗೆ ಸುಮಾರು 9:20ಕ್ಕೆ ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದ ವೇಳೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಹದ ಪರಿಸ್ಥಿತಿ ಗಂಭೀರವಾಗುತ್ತಿರುವ ಮಾಹಿತಿ ಪ್ರಾಂಶುಪಾಲರಿಗೆ ಲಭಿಸಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅವರು ತಕ್ಷಣ ತುರ್ತು ಗಂಟೆ ಬಾರಿಸಿ, ಶಿಕ್ಷಕರ ನೆರವಿನಿಂದ ವಿದ್ಯಾರ್ಥಿಗಳನ್ನು ಶಾಲಾ ಆವರಣದಿಂದ ಸುರಕ್ಷಿತ ಪ್ರದೇಶದತ್ತ ಕರೆದೊಯ್ಯಲು ಮುಂದಾಗಿದ್ದಾರೆ.
ಎಲ್ಲಾ ಮಕ್ಕಳನ್ನು ಬೆಟ್ಟದ ಮೇಲಿರುವ ಸುರಕ್ಷಿತ ಪ್ರದೇಶವಾದ ಬೋಧಿ ವೃಕ್ಷದತ್ತ ಕರೆದೊಯ್ಯಲಾಗಿದ್ದು, ಕೊನೆಯ ವಿದ್ಯಾರ್ಥಿಯೂ ಸುರಕ್ಷಿತವಾಗಿ ಹೊರಹೋಗುವವರೆಗೆ ರಾಜೇಂದ್ರ ದಾವಾಡಿ ಶಾಲೆಯಲ್ಲೇ ಇದ್ದು ಮಾರ್ಗದರ್ಶನ ನೀಡಿದ್ದಾರೆ ಎನ್ನಲಾಗಿದೆ.
ಮಕ್ಕಳು ಸುರಕ್ಷಿತ ಸ್ಥಳ ತಲುಪಿದ ಕೆಲವೇ ಕ್ಷಣಗಳಲ್ಲಿ ಶಾಲೆಯ ಮೂರು ಅಂತಸ್ತಿನ ಕಟ್ಟಡ ಪ್ರವಾಹದ ರಭಸಕ್ಕೆ ಕೊಚ್ಚಿಹೋಗಿದೆ ಎಂದು ವರದಿಯಾಗಿದೆ.
ಪ್ರಾಂಶುಪಾಲರ ತ್ವರಿತ ನಿರ್ಧಾರ ಮತ್ತು ಸಮಯಪ್ರಜ್ಞೆಯಿಂದ 1,643 ವಿದ್ಯಾರ್ಥಿಗಳ ಜೀವ ಉಳಿದಿರುವುದು ಇಡೀ ಗ್ರಾಮದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಆದರೆ ಇದೇ ದುರಂತದಲ್ಲಿ ಶಾಲೆಯ ಶಿಕ್ಷಕ ಸಂತೋಷ್ ಪರಿಹಾರ್ ಹಾಗೂ ಸಿಬ್ಬಂದಿ ಸುಲ್ತಾನ್ ಲಾಮಾ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಸಹೋದ್ಯೋಗಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ನೋವು ಪ್ರಾಂಶುಪಾಲರನ್ನು ಕಾಡುತ್ತಿದೆ.
ವಿಪತ್ತಿನ ಸಂದರ್ಭದಲ್ಲಿ ಕೆಲವೇ ನಿಮಿಷಗಳ ನಿರ್ಧಾರಗಳು ನೂರಾರು ಜೀವಗಳ ಭವಿಷ್ಯವನ್ನೇ ಬದಲಾಯಿಸಬಹುದು ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆಯಾಗಿದೆ.
