ಬೆಂಗಳೂರು : ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ನಾಯಕತ್ವ ಬದಲಾವಣೆ ವಿಚಾರಕ್ಕೆ ತೆರೆ ಬಿದ್ದಿದೆ. ಹೈಕಮಾಂಡ್ ಮಟ್ಟದ ಚರ್ಚೆಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ಸಚಿವರಿಗೆ ತಮ್ಮ ನಿರ್ಧಾರ ತಿಳಿಸಿದ ಸಿದ್ದರಾಮಯ್ಯ ಅವರು, ಇಂದು ಮಧ್ಯಾಹ್ನವೇ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ರಾಜ್ಯಪಾಲರು ಲಭ್ಯವಿಲ್ಲದಿದ್ದರೆ, ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಹಸ್ತಾಂತರಿಸಲು ನಿರ್ಧರಿಸಿದ್ದಾರೆ.
“ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರ ಕಾರ್ಯದರ್ಶಿಗೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಲಿದ್ದೇನೆ” ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡುವ ಮೂಲಕ ಎಲ್ಲಾ ಕಟ್ಟುಕಥೆಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.
ರಾಜೀನಾಮೆ ಘೋಷಣೆ ಹೊರಬೀಳುತ್ತಿದ್ದಂತೆಯೇ, ರಾಜ್ಯದಲ್ಲಿ ಹೊಸ ಸರ್ಕಾರದ ಸಚಿವ ಸಂಪುಟ ರಚನೆಯ ಕಸರತ್ತು ತೆರೆಮರೆಯಲ್ಲಿ ಚುರುಕುಗೊಂಡಿದೆ. ಮುಂದಿನ ನಾಯಕತ್ವ ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಮಹತ್ವದ ಬದಲಾವಣೆಗೆ ಮುಂದಾಗಿದೆ ಎನ್ನಲಾಗುತ್ತಿದೆ. ,
ಈ ಸಲ ಹೊಸ ಸಂಪುಟಕ್ಕೆ ‘ವಯಸ್ಸಿನ ಮಾನದಂಡ’ ನಿಗದಿಪಡಿಸುವ ಸಾಧ್ಯತೆ ದಟ್ಟವಾಗಿದೆ. ಸದಾ ಹಿರಿಯರಿಗೇ ಮಣೆ ಹಾಕುವ ಸಂಪ್ರದಾಯಕ್ಕೆ ಬ್ರೇಕ್ ಹಾಕಿ, ಈ ಬಾರಿ ಯುವ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲು ಚಿಂತನೆ ನಡೆದಿದೆ.
ಮೂಲಗಳ ಪ್ರಕಾರ, ಭವಿಷ್ಯದ ದೃಷ್ಟಿಯಿಂದ ಪಕ್ಷದಲ್ಲಿ ಮುಂದಿನ ತಲೆಮಾರಿನ ನಾಯಕರನ್ನು ಬೆಳೆಸಲು ಕಾಂಗ್ರೆಸ್ ಮುಂದಾಗಿದೆ. ಹೀಗಾಗಿ 60 ವರ್ಷದ ಒಳಗಿನ ಯುವ ಹಾಗೂ ಉತ್ಸಾಹಿ ಶಾಸಕರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಲವು ತೋರಿದೆ.
