Share This News

ಬೆಂಗಳೂರು: ರಾಜ್ಯದಲ್ಲಿ ಕೋಳಿ ಸಾಕಾಣಿಕೆ ಫಾರಂ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ರೈತರು ಎದುರಿಸುತ್ತಿರುವ ತಾಂತ್ರಿಕ ಮತ್ತು ಆಡಳಿತಾತ್ಮಕ ತೊಡಕುಗಳನ್ನು ಶೀಘ್ರವಾಗಿ ನಿವಾರಿಸುವಂತೆ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.ಈ ಸಂಬಂಧ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ್ ಅವರನ್ನು ಖುದ್ದಾಗಿ ಭೇಟಿಯಾದ ಶಾಸಕರು, ರೈತರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು ವಿಶೇಷ ಮನವಿ ಪತ್ರ ಸಲ್ಲಿಸಿದರು.

ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸ್ವ ಉದ್ಯೋಗ ಹಾಗೂ ಕೃಷಿ ಆಧಾರಿತ ಆದಾಯ ವೃದ್ಧಿಗಾಗಿ ಸಾವಿರಾರು ರೈತರು ಮತ್ತು ಯುವಕರು ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಕೃಷಿ ಜಮೀನುಗಳಲ್ಲಿ ನಿರ್ಮಿಸಲಾದ ಕೋಳಿ ಫಾರಂ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಎಸ್ಕಾಂ (ESCOM) ಕಂಪೆನಿಗಳು ಗ್ರಾಮ ಪಂಚಾಯತಿಯಿಂದ ಕಡ್ಡಾಯವಾಗಿ ‘ನಿರಾಕ್ಷೇಪಣಾ ಪತ್ರ’ (NOC) ತರುವಂತೆ ನಿಯಮ ವಿಧಿಸುತ್ತಿವೆ.ಆದರೆ, ಈ ಕಟ್ಟಡಗಳನ್ನು ಕೃಷಿ ಭೂಮಿಯಲ್ಲಿ ನಿರ್ಮಿಸಿರುವುದರಿಂದ ಇವು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವುದಿಲ್ಲ. ತಾಂತ್ರಿಕ ಕಾರಣಗಳಿಂದಾಗಿ ಗ್ರಾಮ ಪಂಚಾಯತಿಗಳು ಇಂತಹ ಕಟ್ಟಡಗಳಿಗೆ ಸ್ವತ್ತಿನ ಸಂಖ್ಯೆ (Property Number) ನೀಡಲು ಅಥವಾ ನಿರಾಕ್ಷೇಪಣಾ ಪತ್ರ (NOC) ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ನಿರಾಕರಿಸುತ್ತಿವೆ. ಈ ಇಲಾಖಾ ಗೊಂದಲದ ನಡುವೆ ಸಿಲುಕಿರುವ ರೈತರು, ಫಾರಂಗಳಿಗೆ ವಿದ್ಯುತ್ ಸಂಪರ್ಕ ಸಿಗದೆ ತೀವ್ರ ಆರ್ಥಿಕ ನಷ್ಟ ಮತ್ತು ಸಂಕಷ್ಟ ಅನುಭವಿಸುತ್ತಿದ್ದಾರೆ.

ಶಾಸಕರ ಪ್ರಮುಖ ಹಕ್ಕೊತ್ತಾಯಗಳು:

  • ಕೃಷಿ ಪೂರಕ ಚಟುವಟಿಕೆ ಪರಿಗಣನೆ: ಕರ್ನಾಟಕ ಭೂ ಕಂದಾಯ ಅಧಿನಿಯಮದ ಪ್ರಕಾರ ಕೋಳಿ ಸಾಕಾಣಿಕೆಯು ಒಂದು ಕೃಷಿ ಪೂರಕ ಚಟುವಟಿಕೆಯಾಗಿದೆ. ಇವುಗಳನ್ನು ಸಾಮಾನ್ಯ ವಾಣಿಜ್ಯ ಕಟ್ಟಡಗಳಂತೆ ಪರಿಗಣಿಸಬಾರದು.
  • ಕಂದಾಯ ಇಲಾಖೆಯಿಂದಲೇ NOC: ರೈತರಿಗೆ ಎದುರಾಗಿರುವ ಗೊಂದಲ ನಿವಾರಿಸಲು ಗ್ರಾಮ ಪಂಚಾಯತ್ NOC ಬದಲಾಗಿ, ಕಂದಾಯ ಇಲಾಖೆಯ ‘ಸಂಬಂಧಿತ ಗ್ರಾಮ ಆಡಳಿತ ಅಧಿಕಾರಿ’ಗಳಿಂದಲೇ (VA) ನಿರಾಕ್ಷೇಪಣಾ ಪತ್ರ ಪಡೆಯಲು ನಿಯಮ ರೂಪಿಸಬೇಕು.
  • ಸರ್ಕಾರಿ ಆದೇಶಕ್ಕೆ ಆಗ್ರಹ: ಈ ಗೊಂದಲಕ್ಕೆ ಶಾಶ್ವತ ಪರಿಹಾರ ನೀಡಲು ರಾಜ್ಯ ಮಟ್ಟದಲ್ಲಿ ಕಂದಾಯ ಇಲಾಖೆಯಿಂದ ಸೂಕ್ತ ಸರ್ಕಾರಿ ಆದೇಶ ಅಥವಾ ಸುತ್ತೋಲೆ ಹೊರಡಿಸಿ ಕೋಳಿ ಸಾಕಾಣಿಕೆದಾರರಿಗೆ ಆಗುತ್ತಿರುವ ಅನ್ಯಾಯವನ್ನು ತಕ್ಷಣ ಸರಿಪಡಿಸಬೇಕು.
  •  

ಸಚಿವರ ಸಕಾರಾತ್ಮಕ ಸ್ಪಂದನೆ: ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರ ಈ ಜನಪರ ಕಾಳಜಿಯ ಕೋರಿಕೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರವೇ ಪರಿಶೀಲಿಸಿ ಸೂಕ್ತ ಆದೇಶ ಹೊರಡಿಸುವ ಭರವಸೆ ನೀಡಿದ್ದು, ಇದರಿಂದ ರಾಜ್ಯದ ಲಕ್ಷಾಂತರ ರೈತರು ಹಾಗೂ ಯುವಜನತೆಗೆ ಬಹುದೊಡ್ಡ ಪ್ರಯೋಜನವಾಗಲಿದೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Share This News