Share This News

ಬೆಂಗಳೂರು: ಮುಖ್ಯಮಂತ್ರಿಯಾದ ಬಳಿಕ ಡಿ.ಕೆ. ಶಿವಕುಮಾರ್ ಅವರು ಹಿರಿಯ ನಾಯಕರನ್ನು ಭೇಟಿಯಾಗಿ ಸಲಹೆ ಪಡೆಯುತ್ತಿರುವ ನಡೆಗೆ ಹೆಚ್.ಡಿ. ಕುಮಾರಸ್ವಾಮಿ ಅವರು ತೀಕ್ಷ್ಣ ಹಾಗೂ ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಡಿ.ಕೆ. ಶಿವಕುಮಾರ್ ಪಕ್ಷಾತೀತವಾಗಿ ಎಲ್ಲ ಪ್ರಮುಖ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ಹಿರಿಯ ನಾಯಕರ ಮನೆಗೆ ಖುದ್ದಾಗಿ ತೆರಳಿ, ಸರ್ಕಾರದ ಸುಗಮ ಆಡಳಿತಕ್ಕಾಗಿ “ನನಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿ” ಎಂದು ಮನವಿ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅವಕಾಶ ನೀಡಿದರೆ ಅವರನ್ನೂ ಭೇಟಿಯಾಗಿ ಚರ್ಚಿಸಲು ಸಿದ್ಧ ಎಂದು ಡಿಕೆಶಿ ಹೇಳಿಕೆ ನೀಡಿದ್ದರು.

ಆದರೆ, ಡಿ.ಕೆ. ಶಿವಕುಮಾರ್ ಅವರ ಈ ‘ಸೌಜನ್ಯದ ನಡೆ’ಗೆ ಹೆಚ್.ಡಿ. ಕುಮಾರಸ್ವಾಮಿ ಅವರು ಕಟು ಶಬ್ದಗಳಿಂದಲೇ ತಿರುಗೇಟು ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರ ಸೌಮ್ಯ ನಡವಳಿಕೆಯ ಹಿಂದಿನ ಅಸಲಿ ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಡಿಕೆಶಿ ಅವರ ಈ ಅತಿ ವಿನಯದ ಪ್ರದರ್ಶನದ ಹಿಂದೆ ರಾಜಕೀಯ ತಂತ್ರ ಅಡಗಿದೆ ಎಂದು ಕುಮಾರಸ್ವಾಮಿ ನೇರವಾಗಿಯೇ ಆರೋಪಿಸಿದ್ದಾರೆ.

ಹಳೆಯ ದಿನಗಳನ್ನು ನೆನಪಿಸಿಕೊಂಡ ಹೆಚ್‌ಡಿಕೆ, “ಎರಡು ಬಾರಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಏನು ಹರಿದಿದ್ದಾರೆ? ಎಂದು ಇದೇ ಡಿ.ಕೆ. ಶಿವಕುಮಾರ್ ಹಿಂದೆ ಸಾರ್ವಜನಿಕವಾಗಿ ಕೇಳಿದ್ದರು. ನಾನೇನೂ ಹರಿದಿಲ್ಲ ಎಂದ ಮೇಲೆ ಈಗ ನನ್ನ ಬಳಿ ಬಂದು ಯಾವ ಸಲಹೆ ಕೇಳುತ್ತಾರೆ? ನಾನಾದರೂ ಅವರಿಗೆ ಏನು ಸಲಹೆ ಕೊಡಲು ಸಾಧ್ಯ?” ಎಂದು ಹಳೆಯ ವಾಗ್ದಾಳಿಯನ್ನು ಉಲ್ಲೇಖಿಸಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.


Share This News