Share This News

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಿರಿಯ ನಾಗರಿಕರನ್ನೇ ಗುರಿಯಾಗಿಸಿಕೊಂಡು ಜಾಲ ಹೆಣೆದಿದ್ದ ಸೈಬರ್ ವಂಚಕರು, ವೃದ್ಧೆಯೊಬ್ಬರನ್ನು ಬರೋಬ್ಬರಿ 24 ಕೋಟಿ ರೂಪಾಯಿ ವಂಚಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ದೈತ್ಯ ‘ಡಿಜಿಟಲ್ ಅರೆಸ್ಟ್’ ಹಗರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮುಂಬೈ, ಅಲಹಾಬಾದ್ ಮತ್ತು ದೆಹಲಿ ಮೂಲದ ಐವರು ಅಂತಾರಾಜ್ಯ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ಗೌರವ್ ಕುಮಾರ್, ಓಂ ಪ್ರಕಾಶ್ ಸೇರಿದಂತೆ ಐವರು ಎಂದು ಗುರುತಿಸಲಾಗಿದೆ.

ಸಿಸಿಬಿ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು. ಸದ್ಯ ದೇಶದ ವಿವಿಧ ನಗರಗಳಲ್ಲಿ ಅಡಗಿದ್ದ ಐವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ, ವಂಚಕರು ಬಳಸುತ್ತಿದ್ದ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 60 ಲಕ್ಷ ರೂಪಾಯಿ ನಗದನ್ನು ಸಿಸಿಬಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ದೈತ್ಯ ಜಾಲದ ಹಿಂದೆ ಬೇರೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.


Share This News