Share This News

ಐಎಎಸ್ ಹುದ್ದೆ ಭಾರತದ ಕೋಟ್ಯಂತರ ಯುವಜನರ ಕನಸು. ಆದರೆ 13 ವರ್ಷಗಳ ಕಾಲ ಅತ್ಯಂತ ದಕ್ಷತೆಯಿಂದ ಆಡಳಿತ ನಡೆಸಿ ಜನಪ್ರಿಯ ಜಿಲ್ಲಾಧಿಕಾರಿಯಾಗಿ ಗುರುತಿಸಿಕೊಂಡಿದ್ದ ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ಇದೀಗ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ.

2013ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ದಿವ್ಯಾ ಮಿತ್ತಲ್, ಸಾಮಾಜಿಕ ಜಾಲತಾಣದ ಮೂಲಕ ತಮ್ಮ ರಾಜೀನಾಮೆ ನಿರ್ಧಾರವನ್ನು ಹಂಚಿಕೊಂಡಿದ್ದಾರೆ. “ಐಎಎಸ್ ನನ್ನ ಜೀವನದ ಒಂದು ಅಧ್ಯಾಯವಷ್ಟೇ, ಅದುವೇ ನನ್ನ ಸಂಪೂರ್ಣ ಬದುಕಲ್ಲ” ಎಂಬ ಸಂದೇಶದೊಂದಿಗೆ ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ಅವರು, ಇದು ಯಾವುದೇ ರಾಜಕೀಯ ಒತ್ತಡದಿಂದ ತೆಗೆದುಕೊಂಡ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವೈಯಕ್ತಿಕ ಆದ್ಯತೆಗಳು, ಕುಟುಂಬದ ಜವಾಬ್ದಾರಿಗಳು ಹಾಗೂ ಬರವಣಿಗೆ, ಬೋಧನೆ ಮತ್ತು ಸಮಾಜ ಸೇವೆಯಂತಹ ಕ್ಷೇತ್ರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ವಿದೇಶದ ಉದ್ಯೋಗ ತೊರೆದು ಭಾರತಕ್ಕೆ ಮರಳಿದ ದಂಪತಿ

ಮಧ್ಯಮ ವರ್ಗದ ಕುಟುಂಬದಿಂದ ಬಂದ ದಿವ್ಯಾ ಮಿತ್ತಲ್ ಅವರು ಐಐಟಿ ದೆಹಲಿ ಹಾಗೂ ಐಐಎಂ ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಬಳಿಕ ಲಂಡನ್‌ನ ಜೆಪಿ ಮಾರ್ಗನ್ ಸಂಸ್ಥೆಯಲ್ಲಿ ಉದ್ಯೋಗ ಪಡೆದಿದ್ದರು.

ಅವರ ಪತಿ ಗಗನ್‌ದೀಪ್ ಸಿಂಗ್ ಧಿಲ್ಲೋನ್ ಕೂಡ ಲಂಡನ್‌ನ ಸಿಟಿ ಗ್ರೂಪ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದರು. ವಿದೇಶದಲ್ಲಿ ಉತ್ತಮ ಸಂಬಳ ಹಾಗೂ ಐಷಾರಾಮಿ ಜೀವನವಿದ್ದರೂ, ದೇಶಕ್ಕೆ ಸೇವೆ ಸಲ್ಲಿಸುವ ಉದ್ದೇಶದಿಂದ ಇಬ್ಬರೂ ತಮ್ಮ ಉದ್ಯೋಗಗಳಿಗೆ ರಾಜೀನಾಮೆ ನೀಡಿ ಭಾರತಕ್ಕೆ ಮರಳಿದ್ದರು.

ಎರಡನೇ ಪ್ರಯತ್ನದಲ್ಲಿ UPSC ಯಶಸ್ಸು

ಭಾರತಕ್ಕೆ ಮರಳಿದ ಬಳಿಕ ದಿವ್ಯಾ ಮಿತ್ತಲ್ ಅವರು 2012ರಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 68ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದರು. ಅವರ ಪತಿ ಗಗನ್‌ದೀಪ್ ಸಿಂಗ್ ಧಿಲ್ಲೋನ್ ಕೂಡ ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದರು.

13 ವರ್ಷಗಳ ಆಡಳಿತಾತ್ಮಕ ಸೇವೆಯಲ್ಲಿ ದಿವ್ಯಾ ಮಿತ್ತಲ್ ಅವರು ದಿಯೋರಿಯಾ, ಮಿರ್ಜಾಪುರ ಮತ್ತು ಸಂತ ಕಬೀರ್ ನಗರ ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರು ಜನಪ್ರಿಯ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ತಮ್ಮ ಸೇವಾ ಅನುಭವವನ್ನು ಸ್ಮರಿಸಿರುವ ಅವರು, ಸರಿಯಾದದ್ದರ ಪರವಾಗಿ ನಿಲ್ಲುವುದನ್ನು ದಿಯೋರಿಯಾ ಕಲಿಸಿತು; ಅಸಾಧ್ಯ ಎಂಬುದು ಸತ್ಯವಲ್ಲ, ಕೇವಲ ಅಭಿಪ್ರಾಯ ಎಂಬುದನ್ನು ಮಿರ್ಜಾಪುರ ಕಲಿಸಿತು ಎಂಬ ಅರ್ಥದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಕುಟುಂಬ ಮತ್ತು ಸಮಾಜ ಸೇವೆಗೆ ಆದ್ಯತೆ

ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿರುವ ದಿವ್ಯಾ ಮಿತ್ತಲ್, ಕುಟುಂಬದ ಜವಾಬ್ದಾರಿಗಳು ಹಾಗೂ ತಮ್ಮ ವೈಯಕ್ತಿಕ ಆಸಕ್ತಿಗಳಿಗೆ ಹೆಚ್ಚಿನ ಸಮಯ ನೀಡಲು ಸೇವೆಯಿಂದ ಹೊರಬರುವ ನಿರ್ಧಾರ ಮಾಡಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ಅವರ ಪತಿ ಗಗನ್‌ದೀಪ್ ಸಿಂಗ್ ಧಿಲ್ಲೋನ್ ಕೂಡ 2022ರಲ್ಲಿ ಕೇಂದ್ರ ವಾಣಿಜ್ಯ ಸಚಿವಾಲಯದ ಜಂಟಿ ಮಹಾನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದರು.

ದಿವ್ಯಾ ಮಿತ್ತಲ್ ಅವರ ರಾಜೀನಾಮೆ ಪ್ರಸ್ತುತ ಸರ್ಕಾರದ ಪರಿಶೀಲನೆಯಲ್ಲಿದ್ದು, ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ ಎಂದು ವರದಿಯಾಗಿದೆ.

ಅಧಿಕಾರದಲ್ಲಿದ್ದಾಗ ಜನಪರ ಆಡಳಿತದ ಮೂಲಕ ಗುರುತಿಸಿಕೊಂಡಿದ್ದ ದಿವ್ಯಾ ಮಿತ್ತಲ್, ಇದೀಗ ತಮ್ಮ ವೈಯಕ್ತಿಕ ಬದುಕು, ಕುಟುಂಬ ಹಾಗೂ ಸಮಾಜ ಸೇವೆಗೆ ಆದ್ಯತೆ ನೀಡಲು ನಿರ್ಧರಿಸಿರುವುದು ಗಮನ ಸೆಳೆದಿದೆ.


Share This News