ಇತ್ತಿಚಿಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮುಸ್ಲಿಂ ಸಮುದಾಯಕ್ಕೆ ಕೊಟ್ಟ ವಾರ್ನಿಂಗ್ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಬುಲ್ಡೋಜರ್ ಬಾಬಾ ಖ್ಯಾತಿಯ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ತಮ್ಮ ರೌದ್ರಾವತಾರವನ್ನ ತೋರಿಸಿದ್ದಾರೆ. ರಸ್ತೆಗಳಲ್ಲಿ ನಮಾಜ್ ಮಾಡೋ ವಿಚಾರದಲ್ಲಿ ಈಗ ಯೋಗಿ ಸರ್ಕಾರ ಅತ್ಯಂತ ಕಠಿಣವಾದ ನಿರ್ಧಾರ ಹಾಕಿದೆ. ಅದು ಬಕ್ರೀದ್ ಹಬ್ಬದ ಬೆನ್ನಲ್ಲೇ ಈ ವಾರ್ನಿಂಗ್ ಕೊಟ್ಟಿದ್ದು ಮುಸ್ಲಿಮರಿಗೆ ನುಂಗಲಾರದ ತುಪ್ಪವಾಗಿದೆ. ರಸ್ತೆಗಳು ಇರೋದು ಜನರ ಓಡಾಟಕ್ಕೆ ಹೊರತು ನಮಾಜ್ ಮಾಡೋಕಲ್ಲ. ಪ್ರಾರ್ಥನೆ ಮಾಡೋಕೆ ಜಾಗ ಇಲ್ಲ ಅಂದ್ರೆ ಮೊದಲು ನಿಮ್ಮ ಜನಸಂಖ್ಯೆ ಕಡಿತ ಮಾಡಿ! ಅಂತ ಯೋಗಿ ಆದಿತ್ಯನಾಥ್ ನೇರವಾಗಿ ಗುಡುಗಿದ್ದಾರೆ. ಹಾಗಾದ್ರೆ ಯೋಗಿಯ ಈ ಖಡಕ್ ವಾರ್ನಿಂಗ್‌ನ ಹಿಂದಿರೋ ಅಸಲಿ ಮರ್ಮವೇನು?
೨ನೇ ಅವಧಿಯ ಅಧಿಕಾರದ ದರ್ಬಾರ್ ನಡೆಸುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮ್ಮ ಭಾಷಣವೊಂದರ ಸುಮಾರು ಎರಡು ನಿಮಿಷಗಳ ವಿಡಿಯೋ ತುಣುಕನ್ನು ‘ಎಕ್ಸ್’ನಲ್ಲಿ ಹಂಚಿಕೊAಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದರ ಬಗ್ಗೆ ದ್ವೇಷಪೂರಿತ ಮಾತನಾಡಿದ್ದಾರೆ. “ನಮಾಜ್ ಮಾಡಬೇಕಿದ್ದರೆ, ಅದನ್ನು ನೀವು ಪಾಳಿ (ಶಿಫ್ಟ್)ನಲ್ಲಿ ಮಾಡಿ… ಇದನ್ನು ಪ್ರೀತಿಯಿಂದ ಒಪ್ಪಿಕೊಂಡರೆ ಸರಿ, ಇಲ್ಲದಿದ್ದರೆ ಬೇರೆ ಮಾರ್ಗ ಅಳವಡಿಸಿಕೊಳ್ಳಬೇಕಾಗುತ್ತದೆ. ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ರಸ್ತೆಗಳ ಮೇಲೆ ನಮಾಜ್ ಮಾಡುವುದನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪ್ರೀತಿಯಿಂದ ಮನವೊಲಿಸಲು ಪ್ರಯತ್ನಿಸುತ್ತೇವೆ, ಅದು ವಿಫಲವಾದರೆ ಕಠಿಣ ಕ್ರಮ ಅನಿವಾರ್ಯ ಎಂದಿದ್ದಾರೆ.
ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು .ನಾವು ಮೊದಲು ಪ್ರೀತಿಯಿಂದ ನಿಮಗೆ ಮನವರಿಕೆ ಮಾಡಿಕೊಡುತ್ತೇವೆ. ಒಂದು ವೇಳೆ ಪ್ರೀತಿಯ ಮಾತು ಕೆಲಸ ಮಾಡದಿದ್ದರೆ, ನಿಯಮ ಪಾಲನೆಗಾಗಿ ಕಾನೂನಿನ ಇತರ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ” ಎಂದು ನೇರವಾಗಿಯೇ ಹೇಳಿದ್ದಾರೆ. ರಸ್ತೆಗಳು ಇರುವುದು ಸಾರ್ವಜನಿಕರು, ಕಾರ್ಮಿಕರು, ವ್ಯಾಪಾರಿಗಳು, ರೋಗಿಗಳು ಹಾಗೂ ತುರ್ತು ಸೇವೆಗಳ ಸಂಚಾರಕ್ಕಾಗಿ. ಯಾವುದೇ ರೀತಿಯ ರಸ್ತೆ ತಡೆಗಳು ದೈನಂದಿನ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ವಾಹನ ಸಂಚರ‍್ನ ನಿಲ್ಲಿಸಲು ಅಥವಾ ಪ್ರಮುಖ ರಸ್ತೆಗಳ ಇಂಟರ್‌ಸೆಕ್ಷನ್ ಧಾರ್ಮಿಕ ಸಭೆಗಳ ಕೇಂದ್ರಗಳನ್ನಾಗಿ ಪರಿವರ್ತಿಸಲು ಯಾರಿಗೂ ಯಾವುದೇ ಹಕ್ಕಿಲ್ಲ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಜನರು ನಿಜವಾಗಿಯೂ ರಸ್ತೆಗಳ ಮೇಲೆ ನಮಾಜ್ ಮಾಡುವುದಿಲ್ಲವೇ? ಎಂದು ನನ್ನನ್ನು ಅನೇಕರು ಆಗಾಗ ಪ್ರಶ್ನಿಸುತ್ತಾರೆ. ನಾನು ಅವರಿಗೆ ಸ್ಪಷ್ಟವಾಗಿ ಹೇಳುತ್ತೇನೆ, ನಮ್ಮ ರಾಜ್ಯದಲ್ಲಿ ಈಗ ಅಂತಹ ಘಟನೆಗಳು ಯಾವುದೇ ಕಾರಣಕ್ಕೂ ನಡೆಯುತ್ತಿಲ್ಲ. ನೀವೇ ಖುದ್ದಾಗಿ ಬಂದು ನೋಡಿ. ರಸ್ತೆಗಳು ಇರುವುದು ಜನರ ಓಡಾಟಕ್ಕೆ. ಯಾರಾದರೂ ಬಂದು ರಸ್ತೆಗಳ ಮಧ್ಯೆ ತಮಾಷೆ ಮಾಡುತ್ತಾ ಟ್ರಾಫಿಕ್ ಜಾಮ್ ಮಾಡಲು ಸಾಧ್ಯವೇ? ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಲು ಯಾರಿಗಾದರೂ ಏನು ಹಕ್ಕಿದೆ? ಕಾನೂನಿನ ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತವೆ ಮತ್ತು ಸಾರ್ವಜನಿಕ ಸ್ಥಳಗಳನ್ನು ದುರುಪಯೋಗಪಡಿಸಿಕೊಳ್ಳಲು ಬಿಡುವುದಿಲ್ಲ. ನಾವು ನಮಾಜ್ ಮಾಡುವುದನ್ನು ತಡೆಯುತ್ತಿಲ್ಲ, ಆದರೆ ಅದು ರಸ್ತೆಗಳ ಮೇಲೆ ನಡೆಯಬಾರದು ಅಷ್ಟೆ” ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ಅವರ ಈ ಇತ್ತೀಚಿನ ಹೇಳಿಕೆಗೆ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎA ಪಕ್ಷದ ವಕ್ತಾರ ಆಸಿಮ್ ವಕಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ತನ್ನ ನಾಗರಿಕರನ್ನು ಧರ್ಮದ ಚೌಕಟ್ಟಿನಲ್ಲಿ ನೋಡುತ್ತಿದೆ ಮತ್ತು ರಾಜ್ಯದಲ್ಲಿ ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ತಾರತಮ್ಯದ ಧೋರಣೆ ಅನುಸರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾನೂನಿನ ಆಡಳಿತವಿದೆ ಎಂದು ಯೋಗಿ ಜಿ ಹೇಳುತ್ತಿದ್ದಾರೆ. ರಸ್ತೆಗಳು ಓಡಾಡಲು ಇರುವುದೇ ಹೊರತು ನಮಾಜ್ ಮಾಡಲು ಅಲ್ಲ ಎನ್ನುತ್ತಾರೆ. ಒಂದು ವೇಳೆ ರಸ್ತೆಯ ಮೇಲೆ ನಮಾಜ್ ಮಾಡಲು ಅವಕಾಶವಿಲ್ಲ ಎಂದಾದರೆ, ಪೂಜೆ ಮತ್ತು ಆರತಿಗಳಿಗಾಗಿ ರಸ್ತೆಗಳನ್ನು ಏಕೆ ಮುಚ್ಚಲಾಗುತ್ತದೆ? ಇದು ಕಾನೂನಿನ ಆಡಳಿತವೇ?” ಎಂದು ಆಸಿಮ್ ವಕಾರ್ ಪ್ರಶ್ನಿಸುವ ಮೂಲಕ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ .
