Share This News

ಚಿತ್ರದುರ್ಗದ ರೇಣುಕಸ್ವಾಮಿ ಅಪಹರಣ-ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 64ನೇ ಸೆಷನ್ಸ್ ನ್ಯಾಯಾಲಯ ಇಂದು ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರ 15 ಜನರ ವಿರುದ್ಧ ಕೊಲೆ, ಕ್ರಿಮಿನಲ್ ಪಿತೂರಿ, ಅಪಹರಣ ಮತ್ತು ಕಾನೂನುಬಾಹಿರ ಸಭೆ ಆರೋಪಗಳನ್ನು ಹೊರಿಸಿದೆ. ಆದರೆ ಎಲ್ಲಾ 17 ಆರೋಪಿಗಳು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಹೀಗಾಗಿ ಕೋರ್ಟ್ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಲ್ಲಾ ಆರೋಪಿಗಳನ್ನು ಇಂದು ಕೋರ್ಟ್ ಗೆ ಹಾಜರುಪಡಿಸಲಾಯಿತು. ಕೋರ್ಟ್ ಹಾಲ್ನಲ್ಲಿ ಅನೇಕ ವಕೀಲರು ಹಾಗೂ ಜನ ಕಿಕ್ಕಿರಿದಿದ್ದರು. ಹೀಗಾಗಿ ನ್ಯಾಯಾಧೀಶ ಐಪಿ ನಾಯಕ್ ಅವರು, ಪ್ರಕರಣಕ್ಕೆ ಸಂಬಂಧ ಇರದ ಎಲ್ಲರೂ ಹೊರಗೆ ಹೋಗುವಂತೆ ಸೂಚಿಸಿದರು. ದೋಷಾರೋಪ ಪ್ರಕಾರ, ಪವಿತ್ರ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದರೆ, ದರ್ಶನ್ ರೇಣುಕಾಸ್ವಾಮಿಯ ಪ್ಯಾಂಟ್ ಬಿಚ್ಚಿಸಿ ಖಾಸಗಿ ಭಾಗಕ್ಕೆ ಒದ್ದಿದ್ದು ಗಂಭೀರ ಹಲ್ಲೆಯಿಂದ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ತೂಗುದೀಪ, ಅವರ ಆಪ್ತೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳ ವಿರುದ್ಧ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯವು ಸೋಮವಾರ 11 ಪ್ರಮುಖ ದೋಷಾರೋಪಗಳನ್ನು ನಿಗದಿಪಡಿಸಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಎಲ್ಲಾ 17 ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು, ತನಿಖಾಧಿಕಾರಿಗಳು ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿನ ಆರೋಪಗಳನ್ನು ಆರೋಪಿಗಳಿಗೆ ವಿವರಿಸಿದರು. 

ಇದರೊಂದಿಗೆ ಪ್ರಕರಣದ ವಿಚಾರಣೆ ಅಧಿಕೃತವಾಗಿ ಆರಂಭಗೊಂಡಂತಾಗಿದ್ದು, ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ. ಅಂದೇ ಸಾಕ್ಷಿಗಳ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.


Share This News