Share This News

ವೀಕ್ಷಕರೇ ಅದು ಬರೋಬ್ಬರಿ 30 ವರ್ಷಗಳ ಹಿಂದಿನ ಕಥೆ! ಒಂದು ಕಡೆ ಇಡೀ ದಕ್ಷಿಣ ಭಾರತವನ್ನೇ ನಡುಗಿಸಿದ್ದ ಕಾಡುಗಳ್ಳ ವೀರಪ್ಪನ್.. ಮತ್ತೊಂದು ಕಡೆ ಸೌತ್ ಸಿನಿಮಾರಂಗದ ಸ್ಟಾರ್ ನಟಿ ಸುಕನ್ಯಾ! 1996ರಲ್ಲಿ ಪ್ರಸಾರವಾದ ಆ ಒಂದು ಇಂಟರ್ವ್ಯೂ ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು. ನಟಿಯೊಬ್ಬರ ಘನತೆಗೆ ಧಕ್ಕೆ ತಂದಿತ್ತು. ಆದರೆ, “ನ್ಯಾಯ ತಡವಾದರೂ ಸಿಗುತ್ತದೆ” ಎಂಬ ಮಾತು ಈಗ ಮತ್ತೊಮ್ಮೆ ನಿಜವಾಗಿದೆ. ಬರೋಬ್ಬರಿ ಮೂರು ದಶಕಗಳ ಕಾಲ ನಡೆದ ಸುದೀರ್ಘ ಕಾನೂನು ಹೋರಾಟದಲ್ಲಿ ನಟಿ ಸುಕನ್ಯಾ ಅವರಿಗೆ ಕೊನೆಗೂ ದೊಡ್ಡ ಜಯ ಸಿಕ್ಕಿದೆ. ಮಾನನಷ್ಟ ಮೊಕದ್ದಮೆಯಲ್ಲಿ ಖಾಸಗಿ ವಾಹಿನಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ದಂಡ ವಿಧಿಸಿದೆ ಮದ್ರಾಸ್ ಹೈಕೋರ್ಟ್! ಏನಿದು ಕಥೆ? ಅಸಲಿಗೆ ಅಂದು ಕಾಡಿನಲ್ಲ ಕುಳಿತು ವೀರಪ್ಪನ್ ಹೇಳಿದ್ದೇನು? ನಟಿ ಸುಕನ್ಯಾ ಅನುಭವಿಸಿದ ನರಕಯಾತನೆ ಎಂಥದ್ದು? ಇಲ್ಲಿ ನೋಡೋಣ.

ಇದು 1996ರಲ್ಲಿ ನಡೆದ ಘಟನೆ. ತಮಿಳಿನ ಖ್ಯಾತ ‘ನಕ್ಕೀರನ್’ ಪತ್ರಿಕೆಯ ಸಂಪಾದಕ ಗೋಪಾಲ್ ಅವರು ಕಾಡಿಗೆ ಹೋಗಿ ವೀರಪ್ಪನ್‌ನ ಭೀಕರ ಸಂದರ್ಶನ ಮಾಡಿದ್ದರು. ಆ 9 ಗಂಟೆಗಳ ಸುದೀರ್ಘ ಸಂದರ್ಶನವನ್ನು ‘ಸನ್ ಟಿವಿ’ ನೆಟ್‌ವರ್ಕ್ ತನ್ನ ವಾಹಿನಿಯಲ್ಲಿ ಸರಣಿ ರೂಪದಲ್ಲಿ ಪ್ರಸಾರ ಮಾಡಿತ್ತು. ಆ ಸಂದರ್ಶನದಲ್ಲಿ ವೀರಪ್ಪನ್, ನಟಿ ಸುಕನ್ಯಾ ಅವರ ವೈಯಕ್ತಿಕ ಜೀವನದ ಬಗ್ಗೆ ಅತ್ಯಂತ ಆಕ್ಷೇಪಾರ್ಹ ಹಾಗೂ ಸುಳ್ಳು ಆರೋಪಗಳನ್ನು ಮಾಡಿದ್ದ. ದೇಶದ ಪ್ರಮುಖ ರಾಜಕಾರಣಿಯೊಬ್ಬರ ಮಗನ ಜೊತೆ ಸುಕನ್ಯಾಗೆ ಸಂಬಂಧವಿತ್ತು ಎಂದು ವೀರಪ್ಪನ್ ಇಲ್ಲಸಲ್ಲದ ಕಥೆ ಕಟ್ಟಿದ್ದ.

ಯಾವಾಗ ಈ ವಿಡಿಯೋ ಟಿವಿಯಲ್ಲಿ ಪ್ರಸಾರವಾಯಿತೋ, ನಟಿ ಸುಕನ್ಯಾ ಅವರ ಇಡೀ ಜೀವನವೇ ಬದಲಾಗಿ ಹೋಯಿತು. ಸಮಾಜದಲ್ಲಿ ಅವರ ಘನತೆಗೆ ತೀವ್ರ ಧಕ್ಕೆ ಉಂಟಾಯಿತು. ಇದರಿಂದ ಕಂಗೆಡದ ಸುಕನ್ಯಾ, 1996 ರಲ್ಲೇ ಕೋರ್ಟ್ ಮೆಟ್ಟಿಲೇರಿದ್ದರು. ತನ್ನ ವಿರುದ್ಧದ ಆರೋಪಗಳು ಸಂಪೂರ್ಣ ಸುಳ್ಳು, ಇದರಿಂದ ನನ್ನ ವೃತ್ತಿಜೀವನ ಹಾಗೂ ಮಾನಸಿಕ ನೆಮ್ಮದಿ ಹಾಳಾಗಿದೆ ಎಂದು 10 ಲಕ್ಷ ರೂಪಾಯಿ ಮಾನನಷ್ಟ ಪರಿಹಾರ ಕೋರಿ ಸಿವಿಲ್ ಸೂಟ್ ದಾಖಲಿಸಿದ್ದರು. ಬಳಿಕ 2015 ರಲ್ಲಿ ಸಿಟಿ ಸಿವಿಲ್ ಕೋರ್ಟ್ ನಟಿ ಸುಕನ್ಯಾ ಪರವಾಗಿ ತೀರ್ಪು ನೀಡಿ, ವಾಹಿನಿಗೆ 10 ಲಕ್ಷ ರೂ. ನೀಡುವಂತೆ ಆದೇಶಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಖಾಸಗಿ ಟಿವಿ ನೆಟ್‌ವರ್ಕ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಈಗ ಬರೋಬ್ಬರಿ 30 ವರ್ಷಗಳ ಸುದೀರ್ಘ ಹೋರಾಟದ ಬಳಿಕ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ. ಕುಮರೇಶ್ ಬಾಬು ಅವರು ಐತಿಹಾಸಿಕ ತೀರ್ಪು ಪ್ರಕಟಿಸಿದ್ದಾರೆ. ಟಿವಿ ವಾಹಿನಿಯ ಅರ್ಜಿಯನ್ನು ವಜಾಗೊಳಿಸಿರುವ ಕೋರ್ಟ್, ಸುಕನ್ಯಾ ಅವರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡಲೇಬೇಕು ಎಂದು ಆದೇಶಿಸಿದೆ. “ಒಂದು ಸಂದರ್ಶನವನ್ನು ಪ್ರಸಾರ ಮಾಡುವ ಮುನ್ನ ಅದರಲ್ಲಿರುವ ಅಂಶಗಳು ಸತ್ಯವೇ ಎಂಬುದನ್ನು ಪರಿಶೀಲಿಸುವುದು ವಾಹಿನಿಯ ಜವಾಬ್ದಾರಿಯಾಗಿತ್ತು. ಎಡಿಟ್ ಮಾಡುವ ಸಂಪೂರ್ಣ ಹಕ್ಕಿದ್ದರೂ ವಾಹಿನಿ ಬೇಕೆಂದೇ ಆ ವಿವಾದಾತ್ಮಕ ಭಾಗವನ್ನು ಪ್ರಸಾರ ಮಾಡಿದೆ” ಎಂದು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ, ವಾಹಿನಿ ತನ್ನ ತಪ್ಪಿಗೆ ಟಿವಿಯಲ್ಲಿ ಕ್ಷಮೆಯಾಚಿಸದೆ, ಯಾವುದೋ ಒಂದು ಪತ್ರಿಕೆಯಲ್ಲಿ ಸಣ್ಣದಾಗಿ ಕ್ಷಮೆ ಕೋರಿದ್ದನ್ನು ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ನೋಡಿದ್ರಲ್ಲ, ಈ ತೀರ್ಪು ಕೇವಲ ನಟಿ ಸುಕನ್ಯಾ ಅವರಿಗೆ ಸಿಕ್ಕ ಜಯ ಮಾತ್ರವಲ್ಲ. ಬದಲಿಗೆ ಟಿಆರ್‌ಪಿ (TRP) ಹೆಸರಿನಲ್ಲಿ ಸೆನ್ಸೇಷನ್ ಸೃಷ್ಟಿಸುವ, ಬೇರೆಯವರ ವೈಯಕ್ತಿಕ ಜೀವನದ ಮೇಲೆ ಕೆಸರೆರಚುವ ಮಾಧ್ಯಮಗಳ ಬೇಜವಾಬ್ದಾರಿತನಕ್ಕೆ ಕೋರ್ಟ್ ನೀಡಿರುವ ದೊಡ್ಡ ಚಾಟಿ ಏಟು. 30 ವರ್ಷಗಳು ಕಳೆದಿರಬಹುದು, ಸುಕನ್ಯಾ ಅವರ ಯೌವನ ಮತ್ತು ಅಂದಿನ ಸ್ಟಾರ್‌ಡಮ್ ವಾಪಸ್ ಬರಲಾರದು. ಆದರೆ ಅವರು ಹೆಣ್ಣಾಗಿ ನಡೆಸಿದ ಹೋರಾಟ ಮತ್ತು ಅವರಿಗೆ ಸಿಕ್ಕ ಗೌರವ ಎಂದಿಗೂ ಮಾಸದಂತದ್ದು.


Share This News