Share This News

ಕರಾವಳಿಯ ಫೈರ್‌ಬ್ರಾಂಡ್, ಆರ್‌ಎಸ್‌ಎಸ್‌ನ ಪ್ರಭಾವಿ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಬಗ್ಗೆ ನಿಮಗೆಲ್ಲ ಗೊತ್ತೆ ಇದೆ. ಇವರ ದ್ವೇಷ ಭಾಷಣದಿಂದಲೇ ಫೇಮಸ್ ಆದವರು. ಅಷ್ಟಕ್ಕೂ, ಯಾವತ್ತೂ ತಗ್ಗದ, ಜಗ್ಗದ ಕಲ್ಲಡ್ಕ ಪ್ರಭಾಕರ್ ಭಟ್  ‘ಇನ್ನು ಮುಂದೆ ನಾನು ದ್ವೇಷ ಭಾಷಣ ಮಾಡುವುದಿಲ್ಲ’ ಅಂತ ಹೇಳಿದ್ದಾರೆ ಅಂದ್ರೆ ನೀವು ನಂಬುತ್ತೀರಾ..? ಕೇವಲ ಹೇಳಿದ್ದಷ್ಟೇ ಅಲ್ಲ. ಲಿಖಿತ ಮುಚ್ಚಳಿಕೆ ಕೂಡ ಬರೆದು ಕೊಟ್ಟಿದ್ದಾರೆ. ಹೀಗೆ ಬರೆದುಕೊಡುವಂತೆ ಮಾಡಿದ್ದು ಯಾರು? ಇದನ್ನೆಲ್ಲ ಈಗ ನೋಡ್ತಾ ಹೋಗೋಣ.

ವಾಯ್ಸ್ – ‘ಮೈಕ್ ಆಫ್ ಮಾಡಿ ಓದಿ!’ — ಹೀಗಂತ ಕೋರ್ಟ್ ಹೇಳುವ ಪರಿಸ್ಥಿತಿ ಬಂದಿದ್ದು ಯಾಕೆ ಗೊತ್ತಾ.. ಎಸ್.. ವೀಕ್ಷಕರೇ ಕರ್ನಾಟಕ ಉನ್ನತ ನ್ಯಾಯಾಲಯದಲ್ಲಿ ಇಂದು ಇಂತಹದ್ದೊಂದು ಹೈಡ್ರಾಮಾ ನಡೆದಿದೆ. ಕರಾವಳಿಯ ಪ್ರಭಾವಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ದ್ವೇಷ ಭಾಷಣದ ಶಬ್ದಗಳನ್ನು ಕೇಳಿ ಸ್ವತಃ ಹೈಕೋರ್ಟ್ ಪೀಠವೇ ಒಂದು ಕ್ಷಣ ಬೆಚ್ಚಿಬಿದ್ದಿದೆ. ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ರದ್ದುಗೊಳಿಸಬೇಕು ಎಂದು ಸಂತ್ರಸ್ತರ ಪರ ವಕೀಲರು ವಾದ ಮಂಡಿಸುತ್ತಾ, ಪ್ರಭಾಕರ್ ಭಟ್ ಆಡಿದ್ದ ಮಾತುಗಳನ್ನು ನ್ಯಾಯಾಲಯದಲ್ಲೇ ಓದಲು ಮುಂದಾದರು. ಆಗ ಕೋರ್ಟ್ ಆವರಣದಲ್ಲಿದ್ದ ಗದ್ದಲ ಮತ್ತು ಆ ಮಾತುಗಳ ತೀವ್ರತೆಯನ್ನು ಕಂಡು, ‘ಮೈಕ್ ಆಫ್ ಮಾಡಿ ಆ ಭಾಗವನ್ನು ಓದಿ’ ಎಂದು ನ್ಯಾಯಪೀಠ ಹೇಳಬೇಕಾಯಿತು.

ಯಾವಾಗಲೂ ತನ್ನ ಆವೇಶಭರಿತ ಮಾತುಗಳು, ಕಟು ಟೀಕೆಗಳ ಮೂಲಕವೇ ಕರಾವಳಿ ಹಾಗೂ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುತ್ತಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಈಗ ಕಾನೂನಿನ ಬಿಸಿ ಸರಿಯಾಗಿಯೇ ತಟ್ಟಿದೆ. ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಹಾಗೂ ವಿವೇಕಾನಂದ ಜಯಂತಿ ವೇಳೆ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಜನ್‍ವಾದಿ ಮಹಿಳಾ ಸಂಘಟನೆಯ ಈಶ್ವರಿ ಪದ್ಮುಂಜ ಪುತ್ತೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಈ ಕೇಸ್ ರದ್ದುಪಡಿಸಲು ಭಟ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಆರಂಭದಲ್ಲಿ ಹೈಕೋರ್ಟ್ ಈ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಆದರೆ, ಈ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ಹಿರಿಯ ವಕೀಲ ಎಸ್. ಬಾಲನ್ ನ್ಯಾಯಾಲಯದಲ್ಲಿ ಸುದೀರ್ಘ ವಾದ ಮಂಡಿಸಿದರು. “ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ದ್ವೇಷ ಭಾಷಣ ಮಾಡುವುದೇ ಒಂದು ಹವ್ಯಾಸವಾಗಿದೆ. ನ್ಯಾಯಾಲಯ ನೀಡಿದ ರಕ್ಷಣೆಯನ್ನು ಅವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಮಾಜದ ಶಾಂತಿ ಕದಡುವ ಇವರ ಭಾಷಣಗಳ ವಿರುದ್ಧ ಈಗಾಗಲೇ 12 ಎಫ್‌ಐಆರ್‌ಗಳು ದಾಖಲಾಗಿವೆ!” ಎಂದು ಬಾಲನ್ ಕೋರ್ಟ್ ಗಮನಕ್ಕೆ ತಂದರು. ಈ ವೇಳೆ ಭಟ್ ಆಡಿದ್ದ ಕೆಲವು ವಿವಾದಾತ್ಮಕ ಸಾಲುಗಳನ್ನು ವಕೀಲರು ಓದಲು ಮುಂದಾದಾಗ, ಕೋರ್ಟ್ ರೂಮ್‌ನಲ್ಲಿ ಸಾರ್ವಜನಿಕವಾಗಿ ಆ ಮಾತುಗಳನ್ನು ಕೇಳಲಾಗದೆ, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು “ಮೈಕ್ ಆಫ್ ಮಾಡಿ ಆ ಸಾಲುಗಳನ್ನು ಓದಿ” ಎಂದು ಸೂಚಿಸಿದರು

ಕಾನೂನಿನ ಬಿಗಿಪಾಶ ಮತ್ತು ದೂರುದಾರರ ಪರ ವಕೀಲರ ಬಲವಾದ ವಾದದ ಮುಂದೆ ಕಲ್ಲಡ್ಕ ಪರ ವಕೀಲರು ಮಣಿಯಲೇಬೇಕಾಯಿತು. ಪ್ರಭಾಕರ್ ಭಟ್ ಅವರಿಗೆ ಈಗ 83 ವರ್ಷ ವಯಸ್ಸಾಗಿದೆ, ಈ ಹಂತದಲ್ಲಿ ತಡೆಯಾಜ್ಞೆ ತೆರವು ಬೇಡ ಎಂದು ಕೋರಿದ ಅವರ ಪರ ಹಿರಿಯ ವಕೀಲ ಅರುಣ್ ಶ್ಯಾಮ್, ಕೊನೆಗೆ ನ್ಯಾಯಾಲಯಕ್ಕೆ ಒಂದು ಮಹತ್ವದ ಮುಚ್ಚಳಿಕೆಯನ್ನು ಬರೆದುಕೊಟ್ಟಿದ್ದಾರೆ. ಅದೇನಪ್ಪಾ ಅಂದ್ರೆ— “ಇನ್ನು ಮುಂದೆ ಕಲ್ಲಡ್ಕ ಪ್ರಭಾಕರ್ ಭಟ್ ಯಾವುದೇ ವೇದಿಕೆಯಲ್ಲೂ ದ್ವೇಷ ಭಾಷಣ ಮಾಡುವುದಿಲ್ಲ!” ಯಾವತ್ತೂ ತನ್ನ ಭಾಷಣದ ಶೈಲಿಯನ್ನು ಬದಲಿಸದ ನಾಯಕನಿಂದ ಇಂತಹದೊಂದು ಶಪಥ ಮಾಡಿಸಿದ್ದು ಬೇರೆ ಯಾರೂ ಅಲ್ಲ, ಅದು ದೇಶದ ಸಂವಿಧಾನ ಮತ್ತು ಕಾನೂನಿನ ಶಕ್ತಿ! ಸದ್ಯಕ್ಕೆ ಹೈಕೋರ್ಟ್ ಭಟ್ ವಿರುದ್ಧದ ಎಲ್ಲಾ ಪ್ರಕರಣಗಳ ವಿವರಗಳನ್ನು ಒದಗಿಸುವಂತೆ ಸೂಚಿಸಿ, ವಿಚಾರಣೆಯನ್ನು ಜೂನ್ 16ಕ್ಕೆ ಮುಂದೂಡಿದೆ.

ಖಂಡಿತವಾಗಿಯೂ, ಕಾನೂನಿಗಿಂತ ಮಿಗಿಲಾದವರು ಯಾರೂ ಇಲ್ಲ ಎಂಬುದಕ್ಕೆ ಹೈಕೋರ್ಟ್‌ನಲ್ಲಿ ನಡೆದ ಈ ಬೆಳವಣಿಗೆಯೇ ಸಾಕ್ಷಿ. ಸದ್ಯಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಇನ್ಮುಂದೆ ದ್ವೇಷದ ಮಾತುಗಳನ್ನು ಆಡುವುದಿಲ್ಲ ಎಂದು ಕೋರ್ಟ್‌ಗೆ ಪ್ರಮಾಣ ಮಾಡಿದ್ದಾರೆ. ಆದರೆ ಜೂನ್ 16 ರ ಮುಂದಿನ ವಿಚಾರಣೆಯಲ್ಲಿ ಹೈಕೋರ್ಟ್ ಇವರ ಹಿಂದಿನ ಎಲ್ಲಾ 12 ಕೇಸ್‌ಗಳ ಹಿಸ್ಟರಿ ನೋಡಿ ಯಾವ ರೀತಿಯ ಕಠಿಣ ಆದೇಶ ಪ್ರಕಟಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.


Share This News