ರೋಹಿತ್ ಶರ್ಮಾ ಅವರು ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ನಂತರ, ಭಾರತೀಯ ಕ್ರಿಕೆಟ್ ತಂಡದ ನಾಯಕತ್ವದಲ್ಲಿ ಭಾರಿ ಬದಲಾವಣೆಗಳು ಬೆಳಕಿಗೆ ಬಂದಿವೆ. ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನಾಯಕರನ್ನಾಗಿ ನೇಮಿಸಲಾಗಿದ್ದರೆ, ಶುಭ್ಮನ್ ಗಿಲ್ ಅವರಿಗೆ ಏಕದಿನ ಮತ್ತು ಟೆಸ್ಟ್ ತಂಡದ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ, ಈಗ ವರದಿಗಳ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಶ್ರೇಯಸ್ ಅಯ್ಯರ್ ಅವರಿಗೆ ಜವಾಬ್ದಾರಿ ನೀಡುವ ಸಾಧ್ಯತೆಯಿದೆ. ಗಿಲ್ ಅವರ ವಿಷಯದಲ್ಲೂ ಇದೇ ರೀತಿಯ ಬದಲಾವಣೆ ನಡೆಯುವ ಲಕ್ಷಣಗಳು ಕಾಣಿಸುತ್ತಿವೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಬಿಸಿಸಿಐ ಮೂಲಗಳು NDTV ಗೆ ಮಾಹಿತಿ ನೀಡಿ, ಹೊಸ ಟಿ20 ತಂಡವನ್ನು ಪ್ರಕಟಿಸುವಾಗ ಕೆಲವು ಬದಲಾವಣೆ ನಿರೀಕ್ಷಿಸಿ. ನಾವು ಒಬ್ಬರೇ ಆಟಗಾರ ಟಿ20 ಮತ್ತು ಏಕದಿನ ಎರಡೂ ತಂಡಗಳನ್ನು ಮುನ್ನಡೆಸುವ ಬಗ್ಗೆ ಆಲೋಚಿಸುತ್ತಿದ್ದೇವೆ. ಅನುಭವದ ಜತೆ ಯುವ ಪ್ರತಿಭೆಗಳಿಗೂ ಅವಕಾಶ ನೀಡಲು ಬಿಸಿಸಿಐ ಬಯಸಿದೆ. ಶ್ರೇಯಸ್ ಕಳೆದ ಕೆಲವು ವರ್ಷಗಳಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಅವರ ಗಾಯದ ಸಮಸ್ಯೆಗಳು ದುರದೃಷ್ಟಕರವಾಗಿತ್ತು ಎಂದು ತಿಳಿಸಿವೆ.

ಮಾಹಿತಿ ಪ್ರಕಾರ ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಟಿ20 ಮತ್ತು ಏಕದಿನ ಎರಡೂ ಮಾದರಿಗಳಿಗೆ ಒಬ್ಬರೇ ನಾಯಕರನ್ನು ಹೊಂದಲು ಬಯಸಿದೆ. ಆದ್ದರಿಂದ, ಶುಭ್ಮನ್ ಗಿಲ್ ಅವರ ಬದಲಿಗೆ ಶ್ರೇಯಸ್ ಅಯ್ಯರ್ ಅವರೇ ಏಕದಿನ ತಂಡ ಮುನ್ನಡೆಸಲಿದ್ದಾರೆ. ಇದರರ್ಥ, 2027 ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಅಯ್ಯರ್ ಭಾರತ ತಂಡವನ್ನು ಮುನ್ನಡೆಸುವ ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.