Share This News

ಇನ್ನು ಮುಂದೆ ಸರ್ಕಾರಿ ಶಾಲೆ ಶಿಕ್ಷಕರು, ಸಿಬ್ಬಂದಿ ನಾನಾ ಕಾರಣವೊಡ್ಡಿ ಶಾಲೆಗೆ ತಡವಾಗಿ ಬರುವಂತಿಲ್ಲ. ಶಾಲೆಗೆ ಚಕ್ಕರ್ ಹೊಡೆದು ಅಲ್ಲಲ್ಲಿ ಓಡಾಡುವಂತಿಲ್ಲ. ರಾಜ್ಯ ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದಿಂದ ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಲೊಕೇಶನ್, ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ ಅಳವಡಿಸಿದೆ.

ನಿರ್ದಿಷ್ಟ ಸಮಯ ಮೀರಿ ಶಾಲೆಗೆ ಹಾಜರಾದರೆ ಆ ದಿನ ಆಕಸ್ಮಿಕ ರಜೆಯೆಂದೇ ಪರಿಗಣಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕರ್ನಾಟಕ ಅಡ್ವಾನ್ಸ್‌ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಆ್ಯಪ್‌ ರೂಪಿಸಲಾಗಿದೆ. ಶಾಲೆ ಬೆಳಗ್ಗೆ 9:45ಕ್ಕೆ ಆರಂಭ ಆಗುವುದಾದರೆ, 9:55 ಅಥವಾ 10 ಗಂಟೆ ಒಳಗೆ Check-in ಮಾಡಲು ಅವಕಾಶವಿದೆ. ಆದರೆ, ಸಾರಿಗೆ ವ್ಯವಸ್ಥೆಯಿಲ್ಲದ ಹಳ್ಳಿಗಳಿಗೆ ಶಿಕ್ಷಕರು ತಲುಪುವುದು ಕಷ್ಟವಾಗಲಿದೆ. 15 ನಿಮಿಷಗಳ ರಿಯಾಯಿತಿ ಸಮಯ ಅರ್ಧಗಂಟೆಗೆ ಹೆಚ್ಚಿಸಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.

ಒಂದು ತಿಂಗಳಲ್ಲಿ ಮೂರು ಬಾರಿ ತಡವಾಗಿ ಬರುವುದು ಮತ್ತು ಬೇಗ ಹೋಗುವುದು ಮಾಡಿದಲ್ಲಿ 1 ದಿನದ ಆಕಸ್ಮಿಕ ರಜೆ ಕಡಿತಗೊಳಿಸಲಾಗುವುದು. ​ಯಾವುದೇ ಮುನ್ಸೂಚನೆ ಅಥವಾ ಅನುಮತಿ ಇಲ್ಲದೇ ಬೇಗ ಚೆಕ್‌ಔಟ್ ಆಗುವುದು ಸತತ ಕಂಡುಬಂದಲ್ಲಿ ಅದನ್ನು ‘ಅನಧಿಕೃತ ಗೈರುಹಾಜರಿ’ ಎಂದು ಪರಿಗಣಿಸಿ, ಬಿಇಒ ಅಥವಾ ಡಿಡಿಪಿಐ ಮಟ್ಟದಲ್ಲಿ ಕಾರಣ ಕೇಳುವ ನೋಟಿಸ್ ನೀಡಲಾಗುತ್ತದೆ. ​ಶಿಕ್ಷಕರ ಕಡ್ಡಾಯ ಹಾಜರಾತಿ ಸಂಬಂಧ ಕೈಗೊಂಡ ತಂತ್ರಜ್ಞಾನ ಆಧರಿತ ಹಾಜರಾತಿ ಬಗ್ಗೆ ನಿರ್ಲಕ್ಷಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ನಿಗದಿತ ಶಾಲಾ ಅವಧಿ ಮುಗಿಯುವ ಮುನ್ನವೇ ಚೆಕ್‌ಔಟ್ ಆದಲ್ಲಿ ಆರಂಭಿಕ ನಿರ್ಗಮನ ಎಂದು ಪರಿಗಣಿಸಿ, ಅದನ್ನು ಕರ್ತವ್ಯದ ಅವಗಣನೆ ಅಥವಾ ಕರ್ತವ್ಯ ಲೋಪ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಅರ್ಧ ದಿನದ ರಜೆ ಕಡಿತವಾಗಲಿದೆ.


Share This News