Share This News

ಬೆಂಗಳೂರಿನಲ್ಲಿ ಯಾವಾಗಲೂ ಮಾಲಿನ್ಯದ್ದೇ ಕಾರುಬಾರು. ಇದೀಗ ಬೆಂಗಳೂರಲ್ಲಿ ಮಾಲಿನ್ಯ ತಡೆಯಲು ಜಿಬಿಎ ಮಾಸ್ಟರ್ ಪ್ಲಾನ್ ಮಾಡಿದೆ. ಸಿಲಿಕಾನ್ ಸಿಟಿಯಲ್ಲಿ ವಾಹನ ದಟ್ಟಣೆ ಹಾಗೂ ಮಾಲಿನ್ಯ ನಿಯಂತ್ರಿಸಲು ಗ್ರೇಟರ್ ಬೆಂಗಳೂರು ಅಥಾರಿಟಿ #1KmChallenge’ ಅಭಿಯಾನ ಆರಂಭಿಸಿದೆ.

1 ಕಿಲೋಮೀಟರ್ ದೂರದ ಸಂಚಾರಕ್ಕೆ ವಾಹನ ತೆಗೆದುಕೊಂಡು ಹೋಗಬೇಡಿ, ನಡೆಯುವಂತೆ ಜನರಲ್ಲಿ ಮನವಿ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಅಥಾರಿಟಿಯ ಕ್ಲೈಮೇಟ್ ಆಕ್ಷನ್ ಸೆಲ್ (ಹವಾಮಾನ ಕ್ರಿಯಾ ಕೋಶ) ಈ ನೂತನ ಅಭಿಯಾನವನ್ನು ಹಮ್ಮಿಕೊಂಡಿದೆ. ನಗರದಲ್ಲಿ ಜನರು ಕೇವಲ ಅರ್ಧ ಅಥವಾ ಒಂದು ಕಿಲೋಮೀಟರ್ ದೂರದ ಅಂಗಡಿ, ಕಚೇರಿ ಅಥವಾ ಮೆಟ್ರೋ ನಿಲ್ದಾಣಗಳಿಗೆ ಹೋಗಲು ಸಹ ಬೈಕ್ ಅಥವಾ ಕಾರುಗಳನ್ನು ಅವಲಂಬಿಸುತ್ತಿದ್ದಾರೆ.

ಇದರಿಂದ ಟ್ರಾಫಿಕ್ ಜಾಮ್ ಹಾಗೂ ಮಾಲಿನ್ಯ ಹೆಚ್ಚುತ್ತಿದೆ. ಇದನ್ನು ತಪ್ಪಿಸಲು, 1 ಕಿಲೋಮೀಟರ್ ಒಳಗಿನ ದೂರಕ್ಕೆ ಕನಿಷ್ಠ 10 ನಿಮಿಷಗಳ ಕಾಲ ಕಾಲಿಗೆ ಕೆಲಸಕೊಡುವಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.ವಾಹನಗಳ ಬಳಕೆ ಕಡಿಮೆ ಮಾಡಿ ಮಾಲಿನ್ಯ ಮುಕ್ತ ಪರಿಸರ ನಿರ್ಮಿಸುವುದು, ದೈನಂದಿನ ನಡಿಗೆಯಿಂದ ಜಡ ಜೀವನಶೈಲಿ ಬದಲಾಯಿಸಿ ದೈಹಿಕ ಆರೋಗ್ಯ ಸುಧಾರಿಸುವುದು. ರಸ್ತೆಗಳ ಮೇಲಿನ ವಾಹನಗಳ ದಟ್ಟಣೆಯನ್ನು ಗಣನೀಯವಾಗಿ ತಗ್ಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.


Share This News